ಪ್ರಯಾಣಿಕರಿಗೆ ಉಚಿತ ಕುಡಿಯುವ ನೀರಿನ ಸೇವೆ ಶ್ಲಾಘನೀಯ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಪ್ರತಿವರ್ಷದಂತೆ ಈ ಬಾರಿ ಬೇಸಿಗೆ ತಿಂಗಳಿನಲ್ಲಿ ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಕುಡಿಯುವ ನೀರಿನ ಸೇವೆಗೆ ಬುಧವಾರ ಚಾಲನೆ ನೀಡಲಾಯಿತು. 
    ಭದ್ರಾವತಿ: ಶ್ರೀ ಸತ್ಯಸಾಯಿ ಬಾಬಾರವರ ಆಶಯದಂತೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಅದರಲ್ಲೂ ಬೇಸಿಗೆ ಸಮಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕುಡಿಯುವ ನೀರಿನ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಆರ್. ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು. 
    ಅವರು ಬುಧವಾರ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಪ್ರತಿವರ್ಷದಂತೆ ಈ ಬಾರಿ ಬೇಸಿಗೆ ತಿಂಗಳಿನಲ್ಲಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಕುಡಿಯುವ ನೀರಿನ ಸೇವೆಗೆ ಚಾಲನೆ ನೀಡಿ ಮಾತನಾಡಿದರು. 

ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಸೇವಾ ಕಾರ್ಯ ಆಯೋಜಿಸಿಕೊಂಡು ಬರುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸಂಚಾರಿ ನಿಯಂತ್ರಕ ವಿಠ್ಠಲ್, ಪರಮೇಶ್ವರಪ್ಪ, ಮೃತ್ಯುಂಜಯ ಕಾನಿಟ್ಕರ್, ಪ್ರಸನ್ನ ಸೇರಿದಂತೆ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು, ಸೇವಾಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.