ವಿಐಎಸ್‌ಎಲ್ ಕಾರ್ಖಾನೆ ಮುಖ್ಯ ದ್ವಾರದ ವಿಘ್ನ ನಿವಾರಕ ಎಡ ಭಾಗಕ್ಕೆ ಸ್ಥಳಾಂತರ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಖ್ಯದ್ವಾರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಿ ಗ್ರಾಮದಲ್ಲಿ ಈಗಾಗಲೇ ತಯಾರಿಸಲಾಗಿರುವ ವಿಘ್ನ ನಿವಾಕರನ ಶಿಲಾ ಮೂರ್ತಿಗೆ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಗ್ರಾಮಕ್ಕೆ ತೆರಳಿ ಶಿಲಾ ಪೂಜೆ ಸಲ್ಲಿಸಿದ್ದಾರೆ. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಖ್ಯದ್ವಾರದಲ್ಲಿ ಸುಮಾರು ೩ ದಶಕಗಳಿಗೂ ಹೆಚ್ಚು ಕಾಲದಿಂದ ಅಲಂಕರಿಸಿರುವ ವಿಘ್ನ ನಿವಾರಕನನ್ನು ಇದೀಗ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. 
    ಕಾರ್ಖಾನೆಯಲ್ಲಿ ಯಾವುದೇ ರೀತಿಯ ವಿಘ್ನಗಳು ನಡೆಯಬಾರದು. ಅಲ್ಲದೇ ಕಾರ್ಖಾನೆ ಇನ್ನೂ ಬೃಹತ್ ಪ್ರಮಾಣದಲ್ಲಿ ಬೆಳೆದು ಸಾವಿರಾರು ಕಾರ್ಮಿಕರು ಹಾಗು ಅವರ ಕುಟುಂಬ ವರ್ಗದವರಿಗೆ ಅನ್ನದಾತನಾಗಿ ದೇಶದ ಹಾಗು ನಾಡಿನ ಆರ್ಥಿಕ ಬೆಳವಣಿಗೆಯಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುವಂತಾಗಲಿ ಎಂಬ ಆಶಯದೊಂದಿಗೆ ಮುಖ್ಯದ್ವಾರದಲ್ಲಿ ವಿಘ್ನನಿವಾರಕನನ್ನು ಪ್ರತಿಷ್ಠಾಪಿಸಲಾಗಿತ್ತು. 
    ದಿನ ಕಳೆದಂತೆ ಈ ವಿಘ್ನ ನಿವಾರಕ ಕಾರ್ಖಾನೆಯ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರಿಗೆ ಸ್ಪೂರ್ತಿದಾಯಕನಾಗಿದ್ದು, ಪ್ರತಿಯೊಂದು ಕೆಲಸಗಳು ಈತನ ಆರಾಧನೆ ಮೂಲಕವೇ ಇಂದಿಗೂ ಆರಂಭಿಸಿಕೊಂಡು ಬರಲಾಗುತ್ತಿದೆ. ಕಾರ್ಖಾನೆಯ ಮುಂಭಾಗದ ರಸ್ತೆಯಲ್ಲಿ ಸಂಚರಿಸುವವರು ಸಹ ಈ ವಿಘ್ನ ನಿವಾರಕನಿಗೆ ಒಂದು ನಮಸ್ಕಾರ ಹಾಕಿ ಮುಂದೆ ಸಾಗುವುದು ಸಾಮಾನ್ಯವಾಗಿದೆ. ಈ ವಿಘ್ನ ನಿವಾರಕನನ್ನು ಸಿಮೆಂಟ್ ಮತ್ತು ಕಬ್ಬಿಣ ಬಳಸಿ ತಯಾರಿಸಲಾಗಿದೆ. ಆದರೂ ಇಂದಿಗೂ ತನ್ನ ಆಕರ್ಷಣೆಯನ್ನು ಕಾಯ್ದುಕೊಂಡು ಬಂದಿದೆ.  ಇಂತಹ ವಿಘ್ನ ನಿವಾರಕನನ್ನು ಇದೀಗ ಕಾರ್ಖಾನೆಯ ಒಂದು ಬದಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. 
    ಪ್ರಸ್ತುತ ಕಾರ್ಖಾನೆ ಎಡ ಭಾಗದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಶಿಲಾ ಮೂರ್ತಿಯನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಿ ಗ್ರಾಮದಲ್ಲಿ ಈಗಾಗಲೇ ತಯಾರಿಸಲಾಗಿದ್ದು, ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಗ್ರಾಮಕ್ಕೆ ತೆರಳಿ ಶಿಲಾ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ. 
    ಹೊಸ ಶಿಲಾ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಕಾರ್ಖಾನೆ ತನ್ನ ವೈಭವ, ಪರಂಪರೆ ಮರಳಿ ಪಡೆಯುವಂತಾಗಲಿ ಎಂಬ ಆಶಯ ಕಾರ್ಮಿಕ ವರ್ಗ ಹಾಗು ಇಲ್ಲಿನ ನಿವಾಸಿಗಳು ಹೊಂದಿದ್ದಾರೆ.