ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ಸಾವು : ಅಂತ್ಯಕ್ರಿಯೆ

ಪತ್ನಿಗೆ ಕಾರ್ಖಾನೆಯಲ್ಲಿ ಕೆಲಸ, ಗುತ್ತಿಗೆದಾರನಿಂದ ೮ ಲಕ್ಷ ರು. ಪರಿಹಾರ 


ಎಸ್. ವಿನೋದ್ ಕುಮಾರ್ 
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸೋಮವಾರ ಕರ್ತವ್ಯ ನಿರ್ವಹಿಸುವಾಗ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಗುತ್ತಿಗೆ ಕಾರ್ಮಿಕರ ಸಂಘದ ಮಾಜಿ ಉಪಾಧ್ಯಕ್ಷ ಎಸ್. ವಿನೋದ್ ಕುಮಾರ್(೩೬) ಅಂತ್ಯಕ್ರಿಯೆ ಮಂಗಳವಾರ ಸಂಜೆ ಬೈಪಾಸ್ ರಸ್ತೆ ಮಿಲ್ಟ್ರಕ್ಯಾಂಪ್, ಹಳೇ ಬುಳ್ಳಾಪುರ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. 
    ಕಾರ್ಖಾನೆಯ ಟ್ರಾಫಿಕ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನೋದ್ ಕುಮಾರ್, ಸೋಮವಾರ ಸಂಜೆ ೬.೩೦ರ ಸಮಯದಲ್ಲಿ ಬಿಲ್ಲೆಟ್ ಕಬ್ಬಿಣದ ಸಾಮಗ್ರಿಗಳನ್ನು ಇಳಿಸುವಾಗ ಕಬ್ಬಿಣದ ಸರಪಳಿ ಕತ್ತರಿಸಿಹೋದ ಹಿನ್ನಲೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ರಾತ್ರಿ ಸುಮಾರು ೭.೩೦ರ ಸಮಯದಲ್ಲಿ ಮೃತಪಟ್ಟಿದ್ದರು.


    ಮಾಹಿತಿ ತಿಳಿದ ತಕ್ಷಣ ಸಂಸದ ಬಿ.ವೈ ರಾಘವೇಂದ್ರರವರು ಆಸ್ಪತ್ರೆಗೆ ಆಗಮಿಸಿ ಕಾರ್ಮಿಕರಿಗೆ ಧೈರ್ಯ ತುಂಬಿದ್ದರು. ವಿನೋದ್ ಕುಮಾರ್ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. 
    ವಿನೋದ್ ಕುಮಾರ್ ಪತ್ನಿಗೆ ಕಾರ್ಖಾನೆಯಲ್ಲಿ ಕೆಲಸ : 
    ಕಾರ್ಖಾನೆ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳನ್ನೊಳಗೊಂಡ ತಂಡ ವಿನೋದ್ ಕುಮಾರ್ ಪತ್ನಿಗೆ ಕಾರ್ಖಾನೆಯಲ್ಲಿ ಕೆಲಸ ನೀಡುವುವಂತೆ ಮನವಿ ಮಾಡಿದರಲ್ಲದೆ, ಗುತ್ತಿಗೆದಾರನಿಂದ ಕುಟುಂಬಕ್ಕೆ ಪರಿಹಾರ ಕೊಡುವಂತೆ ಮನವಿ ಮಾಡಿದರು. 
    ಮನವಿಗೆ ಸ್ಪಂದಿಸಿದ ಆಡಳಿತ ಮಂಡಳಿ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸುವ ಜೊತೆಗೆ ಕಾರ್ಖಾನೆಯಲ್ಲಿ ವಿನೋದ್ ಕುಮಾರ್ ಪತ್ನಿಗೆ ಕೆಲಸ ನೀಡಿ ಆದೇಶ ಪ್ರತಿಯನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ. ಅಲ್ಲದೆ ಗುತ್ತಿಗೆದಾರನಿಂದ ೮ ಲಕ್ಷ ರು. ಪರಿಹಾರದ ಹಣ ಪಡೆದು ವಿನೋದ್ ಕುಮಾರ್ ಪುತ್ರಿ ಹೆಸರಿನಲ್ಲಿ ಠೇವಣಿ ಇಡಲು ಸೂಚಿಸಿದೆ.


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ದುರ್ಘಟನೆಯಲ್ಲಿ ಮೃತಪಟ್ಟ ಗುತ್ತಿಗೆ ಕಾರ್ಮಿಕ ವಿನೋದ್ ಕುಮಾರ್ ಪತ್ನಿಗೆ ಕಾರ್ಖಾನೆಯಲ್ಲಿ ಕೆಲಸ ನೀಡುವ ಆದೇಶ ಪ್ರತಿಯನ್ನು ಪ್ರಭಾರ ಕಾರ್ಯಪಾಲಕ ನಿರ್ದೇಶಕ ವಿಶ್ವನಾಥ್ ಹಸ್ತಾಂತರಿಸಿದರು. 
    ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘ ಮತ್ತು ನಿವೃತ್ತ ನೌಕರರ ಸಂಘ ದುರ್ಘಟನೆಗೆ ವಿಷಾದ ವ್ಯಕ್ತಪಡಿಸಿವೆ. ಅಲ್ಲದೆ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಕಾರ್ಮಿಕರು ಮುಖಂಡರು, ಗಣ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳು ವಿನೋದ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿವೆ.  
    ವಿನೋದ್ ಕುಮಾರ್‌ರವರು ಜನ್ನಾಪುರ ಗಣೇಶ್ ಕಾಲೋನಿ ಕಾರ್ಖಾನೆಯ ವಸತಿಗೃಹದಲ್ಲಿ ವಾಸವಾಗಿದ್ದರು. ಪತ್ನಿ ಹಾಗು ಒಂದು ಹೆಣ್ಣು ಮಗು ಇದೆ. ಇವರ ವಸತಿ ಗೃಹದಲ್ಲಿ ಸಂಜೆ ೫ ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.