ಮಾದಿಗ ಸಮುದಾಯಕ್ಕೆ ೫.೨೫ರಷ್ಟು ಒಳ ಮೀಸಲಾತಿ ಸ್ವಾಗತಾರ್ಹ : ಡಾ. ಎಸ್. ಕೃಷ್ಣ
ಭದ್ರಾವತಿಯಲ್ಲಿ ಬುಧವಾರ ತಾಲೂಕು ಮಾದಿಗ ಸಮಾಜದಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಡಾ. ಎಸ್. ಕೃಷ್ಣ ಮಾತನಾಡಿದರು.
ಭದ್ರಾವತಿ : ರಾಜ್ಯ ಸರ್ಕಾರ ವಿಶೇಷ ಸಚಿವ ಸಂಪುಟದಲ್ಲಿ ಮಾದಿಗ ಸಮುದಾಯಕ್ಕೆ ಸಂಬಂಧಿಸಿದ ಜಾತಿಗಳಿಗೆ ೫.೨೫ರಷ್ಟು ಒಳ ಮೀಸಲಾತಿ ನೀಡಲು ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಮಾದಿಗ ಸಮಾಜ ಕೃತಜ್ಞತೆ ಸಲ್ಲಿಸುತ್ತದೆ ಎಂದು ಸಮಾಜದ ಅಧ್ಯಕ್ಷ ಡಾ. ಎಸ್. ಕೃಷ್ಣ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿಗಾಗಿ ಕಳೆದ ಸುಮಾರು ೩೫ ವರ್ಷಗಳಿಂದ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಮಾದಿಗ ಸಮುದಾಯಕ್ಕೆ ಸಂಬಂಧಿಸಿದ ಜಾತಿಗಳಿಗೆ ೫.೨೫ರಷ್ಟು ಒಳ ಮೀಸಲಾತಿ ನಿಗದಿಪಡಿಸಲಾಗಿದೆ. ಇದರಿಂದಾಗಿ ತಲತಲಾಂತರಗಳಿಂದ ಶೋಷಣೆಗೆ ಒಳಗಾಗಿರುವ ಸಮುದಾಯದ ಜಾತಿಗಳಿಗೆ ನ್ಯಾಯ ನೀಡಿದಂತಾಗುತ್ತದೆ ಎಂದರು.
ಇಂದಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗು ಶೈಕ್ಷಣಿಕವಾಗಿ ಈ ಜಾತಿಗಳು ಹಿಂದುಳಿದಿವೆ. ಮುಂದುವರೆದ ಸಮುದಾಯಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಒಳ ಮೀಸಲಾತಿಯಿಂದ ಸ್ವಲ್ಪ ನೆಮ್ಮದಿ ಕಾಣುವಂತಾಗಿದೆ. ಸರ್ಕಾರ ಶೋಷಿತ ಎಲ್ಲಾ ಸಮುದಾಯಗಳಿಗೂ ನ್ಯಾಯಬದ್ದವಾಗಿ ಒಳಮೀಸಲಾತಿ ಪೂರ್ಣಪ್ರಮಾಣದಲ್ಲಿ ಹಂಚಿಕೆಮಾಡಿ ಅನುಷ್ಠಾನಗೊಳಿಸುವ ವಿಶ್ವಾಸವಿದೆ ಎಂದರು.
ಒಳ ಮೀಸಲಾತಿ ಜಾರಿಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗು ಸಚಿವ ಸಂಪುಟದ ಸಚಿವರುಗಳಿಗೆ ಮತ್ತು ಒಳಮೀಸಲಾತಿಗಾಗಿ ಹೋರಾಟ ನಡೆಸಿದ ಸಮುದಾಯದ ಸಚಿವರಾದ ಕೆ.ಎಚ್ ಮುನಿಯಪ್ಪ, ಆರ್.ಬಿ ತಿಮ್ಮಾಪುರ, ಶಾಸಕರಾದ ಬಸವಂತಪ್ಪ, ಸಂಸದ ಗೋವಿಂದ ಕಾರಜೋಳ, ಕೇಂದ್ರ ಮಾಜಿ ಸಚಿವ ಎ. ನಾರಾಯಣ ಸ್ವಾಮಿ, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಮಾಜಿ ಸಚಿವ ಎಚ್. ಆಂಜನೇಯ ಹಾಗು ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳಿಗೆ ಮತ್ತು ಹೋರಾಟಕ್ಕೆ ಸಹಕರಿಸಿದ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾರುತಿ, ಮರಿಸಿದ್ದಯ್ಯ, ಶಿವಲಿಂಗಪ್ಪ, ಬಾಲಕೃಷ್ಣ, ಸಂಪತ್ ಕುಮಾರ್, ಯಶವಂತ ಕುಮಾರ್, ಬಸವರಾಜ, ಮಹೇಶ್ ಕುಮಾರ್, ಚಂದ್ರಪ್ಪ ಕೂಡ್ಲಿಗೆರೆ, ಪ್ರಭಾಕರ್, ಎಸ್. ಹನುಮಂತಪ್ಪ ಮತ್ತು ಮಂಜುಳ ಸಂಗಡಿಗರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
