ಶ್ರೀ ಮುತ್ತು ಮಾರಿಯಮ್ಮ ೪೧ನೇ ವರ್ಷದ ಕರಗ ಮಹೋತ್ಸವ
ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ, ಹನುಮಂತನಗರದ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ೪೧ನೇ ವರ್ಷದ ಕರಗ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಮಂಗಳವಾರ ಕರಗದೊಂದಿಗೆ ಕಾವಡಿ ಹರಕೆಯೊತ್ತ ಭಕ್ತರು ಬಾಯಿಗೆ ಕಬ್ಬಿಣದ ತ್ರಿಶೂಲ ಚುಚ್ಚಿಕೊಂಡು ಸಾಗಿದರೇ, ಮತ್ತೊಬ್ಬ ಭಕ್ತ ಬೆನ್ನಿಗೆ ಕಬ್ಬಿಣದ ಕೊಕ್ಕೆಗಳನ್ನು ಚುಚ್ಚಿಕೊಂಡು ಜೆಸಿಬಿಯಲ್ಲಿ ನೇತಾಡುವ ಮೂಲಕ ಅಮ್ಮನವರಿಗೆ ಭಕ್ತಿ ಸಮರ್ಪಣೆ ಮಾಡುವ ದೃಶ್ಯ ರೋಮಾಂಚನಕಾರಿ ಕಂಡು ಬಂದಿತು.
ಭದ್ರಾವತಿ : ನಗರಸಭೆ ವ್ಯಾಪ್ತಿಯ ಹೊಸಮನೆ, ಹನುಮಂತನಗರ ಸರ್ಕಾರಿ ಕನ್ನಡ ಶಾಲೆ ಎದುರಿನ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ೪೧ನೇ ವರ್ಷದ ಕರಗ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಈಗಾಗಲೇ ದುರ್ಗಾಹೋಮ, ಅಮ್ಮನವರಿಗೆ ಕಂಕಣ ಕಟ್ಟುವುದು, ಗಂಗೆಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದ್ದು, ಮಂಗಳವಾರ ಬೆಳಿಗ್ಗೆ ಅಮ್ಮನವರಿಗೆ ಅಭಿಷೇಕ ಮತ್ತು ವಿಶೇಷ ಪೂಜೆ, ಮಂಗಳಾರತಿ, ನಂತರ ಹೊಸಮನೆ ಗೊಂದಿ ಚಾನಲ್ ಹತ್ತಿರ ಕರಗ ಜೋಡಿಸಿ ರಾಜಬೀದಿ ಮೂಲಕ ಉತ್ಸವ ಮೆರವಣಿಗೆ ನಡೆಸಿ ದೇವಸ್ಥಾನಕ್ಕೆ ತರಲಾಯಿತು.
ಮೆರವಣಿಗೆಯಲ್ಲಿ ಕರಗದೊಂದಿಗೆ ಕಾವಡಿ ಹರಕೆಯೊತ್ತ ಭಕ್ತರು ಬಾಯಿಗೆ ಕಬ್ಬಿಣದ ತ್ರಿಶೂಲ ಚುಚ್ಚಿಕೊಂಡು ಸಾಗಿದರೇ, ಮತ್ತೊಬ್ಬ ಭಕ್ತ ಬೆನ್ನು ಹಾಗು ಕಾಲುಗಳಿಗೆ ಕಬ್ಬಿಣದ ಕೊಕ್ಕೆಗಳನ್ನು ಚುಚ್ಚಿಕೊಂಡು ಜೆಸಿಬಿಯಲ್ಲಿ ನೇತಾಡುವ ಮೂಲಕ ಅಮ್ಮನವರಿಗೆ ಭಕ್ತಿ ಸಮರ್ಪಣೆ ಮಾಡುವ ದೃಶ್ಯ ರೋಮಾಂಚನಕಾರಿ ಕಂಡು ಬಂದಿತು. ಮಹಿಳೆಯರು ಕೆಂಡದ ಮಡಕೆ ಹಿಡಿದು ಸಾಗಿದರೆ, ಉಳಿದಂತೆ ಭಕ್ತರು ತಮಟೆ ಸದ್ದಿಗೆ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.
ಮಧ್ಯಾಹ್ನ ಅಂಬಲಿ ಉಯ್ಯುವ ಕಾರ್ಯಕ್ರಮ, ಸಂಜೆ ವಿಶೇಷ ಕುಂಭ ಪೂಜೆ, ಮಹಾಮಂಗಳಾರತಿ ಇನ್ನಿತರ ಧಾರ್ಮಿಕ ಆಚರಣೆಗಳು ನೆರವೇರಿದವು.
ಏ.೨೨ರ ಬುಧವಾರ ಬೆಳಿಗ್ಗೆ ಅಮ್ಮನವರಿಗೆ ಅರಿಶಿಣ ಅಭಿಷೇಕ(ಅರಿಶಿಣ ಓಕಳಿಯಾಟ) ನಂತರ ಮಂಗಳ ವಾದ್ಯ, ಪಂಬೆ ಇತರೆ ವಾದ್ಯಗಳೊಂದಿಗೆ ರಾಜಬೀದಿ ಮೆರವಣಿಗೆಯೊಂದಿಗೆ ಕರಗ ಗಂಗೆಯಲ್ಲಿ ವಿಸರ್ಜನೆ ನಡೆಯಲಿದೆ.
ಏ.೨೮ರಂದು ಮರು ಕುಂಭ ಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
