ನೂತನ ಡಾ.ಬಿ.ಆರ್ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸದೆ ಅವಮಾನ

ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಖಂಡನೆ 


ಭದ್ರಾವತಿಯಲ್ಲಿ ಶನಿವಾರ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಿಧನ ಹೊಂದಿದ ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್ ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. 
    ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟನೆಗೊಳಿಸದೆ ಅವಮಾನಗೊಳಿಸಿರುವುದು ಖಂಡನೀಯ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಕ್ರೋಶ ವ್ಯಕ್ತಪಡಿಸಿದರು. 
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂತನ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಬೇಕೆಂಬುದು ಕ್ಷೇತ್ರದ ನಾಗರೀಕರ ಬೇಡಿಕೆಯಾಗಿತ್ತು. ಸಿದ್ದರಾಮಯ್ಯರವರು ಪಕ್ಕದ ತರೀಕೆರೆ ತಾಲೂಕಿನ ಶಾಸಕರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಲ್ಲದೆ ಬಾಳೆಹೊನ್ನೂರಿನ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಆದರೆ ಈ ಕ್ಷೇತ್ರಕ್ಕೆ ಆಗಮಿಸದೆ ಅಂಬೇಡ್ಕರ್‌ರವರಿಗೆ ಅವಮಾನಗೊಳಿಸಿದ್ದಾರೆ. ಕ್ಷೇತ್ರದ ಮೈಸೂರು ಕಾಗದ ಕಾರ್ಖಾನೆ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯರವರು ಇದುವರೆಗೂ ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯವಹಿಸಿರುವುದು ಖಂಡನೀಯ. ಪದೇ ಪದೇ ಕ್ಷೇತ್ರದ ಜನರಿಗೆ ಅವಮಾನಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. 
    ಅಂಬೇಡ್ಕರ್ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್, ಸಂಸದ ಬಿ.ವೈ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಹಾಗು ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೆ ಭವನ ನಿರ್ಮಾಣಕ್ಕೆ ಹೋರಾಟ ನಡೆಸಿದ ಹಾಗು ಉದ್ಘಾಟನೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 
    ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನಕ್ಕಾಗಿ ಹೋರಾಟ ನಡೆಸಿದ ನಿಜವಾದ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಈ ಹಿನ್ನಲೆಯಲ್ಲಿ ಜೂ.೨೧ರಂದು ಹೋರಾಟಗಾರರಾದ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನೆನಪಿನಲ್ಲಿ ಅಂಬೇಡ್ಕರ್ ಭವನದಲ್ಲಿ ಸಮಿತಿಯಿಂದ ನಿಜವಾದ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. 
    ಕಳೆದ ೨ ದಿನಗಳ ಹಿಂದೆ ನಿಧನ ಹೊಂದಿದ ಸಮಿತಿ ಕಾರ್ಯಾಧ್ಯಕ್ಷರಾದ ಐ.ಎಲ್ ಅರುಣ್ ಕುಮಾರ್ ಅವರು, ಕಳೆದ ೫೦ ವರ್ಷಗಳಿಂದ ದೀನ ದಲಿತರ ಸೇವೆ ಸಲ್ಲಿಸುತ್ತಾ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನ ತುಂಬಾ ನೋವುಂಟು ಮಾಡಿದ್ದು, ಸಮಿತಿ ಪದಾಧಿಕಾರಿಗಳು, ಸದಸ್ಯರು ಶ್ರದ್ದಾಂಜಲಿ ಸಲ್ಲಿಸುತ್ತೇವೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ನಗರಸಭೆ ಮಾಜಿ ಸದಸ್ಯೆ ಶೋಭಾ ರವಿಕುಮಾರ್, ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ದಲಿತ ಮುಖಂಡರಾದ ವಿಜಿಯಮ್ಮ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.