ಬಿಜೆಪಿ ಪ್ರಸ್ತುತ ವಿಶ್ವದಲ್ಲಿಯೇ ಅತಿ ದೊಡ್ಡ ರಾಜಕೀಯ ಪಕ್ಷ ಎಂಬುದು ನಮ್ಮೆಲ್ಲರ ಹೆಮ್ಮೆ
ಭದ್ರಾವತಿ ನಗರದಲ್ಲಿ ಸೋಮವಾರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ: ಭಾರತೀಯ ಜನತಾ ಪಕ್ಷದ ಪ್ರತಿಯೊಂದು ಹೆಜ್ಜೆಯಲ್ಲೂ ಕಾರ್ಯಕರ್ತರ ತ್ಯಾಗ, ಹಿರಿಯರ ಮಾರ್ಗದರ್ಶನ ಮತ್ತು ಜನರ ವಿಶ್ವಾಸ ಹೆಚ್ಚಿನದ್ದಾಗಿದ್ದು, ಪ್ರಸ್ತುತ ವಿಶ್ವದಲ್ಲಿಯೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಪಕ್ಷದ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮತ್ತು ಗ್ರಾಮಾಂತರ ಮಂಡಲ ಕೆ.ಎಚ್ ತೀರ್ಥಯ್ಯ ಅಭಿಮಾನ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಪ್ರಮುಖರು ಏ.೬, ೧೮೯೦ರಲ್ಲಿ ಸ್ಥಾಪಿಸಿದ ಪಕ್ಷ ೪೬ ವರ್ಷಗಳಿಂದ ನಿರಂತರವಾಗಿ ಬಲವರ್ಧನೆಗೊಂಡು ಮುನ್ನಡೆಯುತ್ತಿದ್ದು, ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ನಾಯಕತ್ವ ಲಭಿಸಿದೆ. ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಪ್ರತಿಯೊಬ್ಬರು ಶಕ್ತಿ ಮೀರಿ ಶ್ರಮಿಸಬೇಕೆಂದರು.
ಪಕ್ಷದ ಪ್ರಮುಖರಾದ ಜಿ. ಆನಂದ ಕುಮಾರ್, ಎಂ. ಮಂಜುನಾಥ್, ಸುಲೋಚನ ಪ್ರಕಾಶ್ ಮತ್ತು ಕಾ.ರಾ ನಗರಾಜ್ ಸೇರಿದಂತೆ ಇತರರು ಮಾತನಾಡಿ, ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತಗಳು ಇತರೆ ಪಕ್ಷಗಳಿಗಿಂತ ಭಿನ್ನವಾಗಿ, ವಿಶಿಷ್ಟವಾಗಿವೆ ಎಂದರು.
ಮಂಡಲಗಳ ಪ್ರಧಾನ ಕಾರ್ಯದರ್ಶಿಗಳಾದ ರಘುರಾವ್, ಮೊಸರಳ್ಳಿ ಅಣ್ಣಪ್ಪ, ಹನುಮಂತ ನಾಯ್ಕ, ಹಿರಿಯ ಕಾರ್ಯಕರ್ತರು, ಮುಖಂಡರು. ಮಂಡಲ ಪದಾಧಿಕಾರಿಗಳು, ಮೋರ್ಚಾಗಳ, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಪಾಲ್ಗೊಂಡಿದ್ದರು.
