ಸಿದ್ದಾರ್ಥ ಅಂಧರ ಕೇಂದ್ರಕ್ಕೆ ಅಡುಗೆ ಅನಿಲ ನೀಡುವುದಾಗಿ ಹಣ ಪಡೆದು ವಂಚನೆ
ಭದ್ರಾವತಿ: ನಗರದ ನ್ಯೂ ಟೌನಿನ ಸಿದ್ದಾರ್ಥ ಅಂಧರ ಕೇಂದ್ರಕ್ಕೆ ಅಡುಗೆ ಅನಿಲ(ಸಿಲಿಂಡರ್) ಸರಬರಾಜು ಮಾಡುವುದಾಗಿ ಸುಳ್ಳು ಹೇಳಿ ೪,೫೦೦ ರು. ನಗದು ಪಡೆದು ವಂಚಿಸಿರುವ ಘಟನೆ ಬುಧವಾರ ನಡೆದಿದೆ.
ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಅಡುಗೆ ಅನಿಲ ದೊರೆಯುವುದು ತುಂಬಾ ಕಷ್ಟವಾಗಿರುತ್ತದೆ. ಪ್ರಸ್ತುತ ನಮ್ಮಲ್ಲಿ ಸಂಗ್ರಹವಿದ್ದು, ೪-೫ ಸಿಲಿಂಡರ್ ನೀಡುವುದಾಗಿ ನಗರದ ಜಯದೇವ ಗ್ಯಾಸ್ ಏಜೆನ್ಸಿಯ ಹೆಸರು ಹೇಳಿಕೊಂಡು ಮಂಜುನಾಥ್ ಎಂಬಾತ ಆಟೋರಕ್ಷಾದಲ್ಲಿ ಅಂಧರ ಕೇಂದ್ರಕ್ಕೆ ಬಂದಿದ್ದಾನೆ.
ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪರವರು ಮೂಲೆಕಟ್ಟೆಯಲ್ಲಿರುವ ತಮ್ಮ ಮನೆಗೆ ಬರಲು ಹೇಳಿ ಆತನಿಗೆ ೪,೫೦೦ ರು. ನಗದು ನೀಡಿದ್ದಾರೆ. ಹಣ ಪಡೆದ ನಂತರ ಆಟೋದಲ್ಲಿ ಸಿಲಿಂಡರ್ ತರುವುದಾಗಿ ಹೇಳಿ ಪರಾರಿಯಾಗಿದ್ದಾನೆ. ಈ ಸಂಬಂಧ ನ್ಯೂಟೌನ್ ಹಾಗು ಪೇಪರ್ ಟೌನ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿರುವುದಾಗಿ ಶಿವಬಸಪ್ಪ ತಿಳಿಸಿದ್ದಾರೆ.
