ತಾರತಮ್ಯವಿಲ್ಲದ ಕಾಯಕ ಸಮಾಜ ನಿರ್ಮಾಣ ಮಾಡಿದ ಮಹಾನ್ ನಾಯಕ ಬಸವಣ್ಣ : ಶ್ರೀ ಡಾ. ಗುರುಬಸವ ಮಹಾಸ್ವಾಮೀಜಿ

 

ಭದ್ರಾವತಿಯಲ್ಲಿ ಸೋಮವಾರ ಸಂಜೆ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನೂತನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ಪ್ರತಿಯೊಬ್ಬರು ಯಾವುದೇ ತಾರತಮ್ಯವಿಲ್ಲದೆ ಕಾಯಕದಿಂದ ಬದುಕಬೇಕೆಂಬುದನ್ನು ತಿಳಿಸಿಕೊಡುವ ಜೊತೆಗೆ ೧೨ನೇ ಶತಮಾನದಲ್ಲಿಯೇ ಕಾಯಕ ಸಮಾಜ ನಿರ್ಮಾಣ ಮಾಡಿದ ಮಹಾನ್ ನಾಯಕ ಬಸವಣ್ಣನವರು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕೆಂದು ಚನ್ನಗಿರಿ ಪಾಂಡೋಮಟ್ಟಿ, ವಿರಕ್ತಮಠದ ಶ್ರೀ ಡಾ. ಗುರುಬಸವ ಮಹಾಸ್ವಾಮೀಜಿ ಹೇಳಿದರು. 
    ಶ್ರೀಗಳು ಸೋಮವಾರ ಸಂಜೆ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನೂತನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು. 
    ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶೋಷಣೆಗಳಿಂದ ಕೂಡಿದ ಮೂಡನಂಬಿಕೆ, ಕಂದಾಚಾರಗಳಿಂದ ತುಂಬಿದ ಅಂದಿನ ಸಮಾಜದಲ್ಲಿ ಬಸವಣ್ಣನವರು ಮಾಡಿದ ಕ್ರಾಂತಿ ನಿಜಕ್ಕೂ ಅವಿಸ್ಮರಣೀಯವಾಗಿದೆ. ಎಲ್ಲಾ ಶೋಷಣೆಗಳಿಂದ ಮುಕ್ತಿಗೊಳಿಸಿ ಜ್ಞಾನದ ಬೆಳಕು ಮೂಡಿಸಿದ ಬಸವಣ್ಣನವರು ನಿಜವಾದ ನಾಯಕನಾಗಿದ್ದು, ಇಂತಹ ಬಸವಣ್ಣನವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಿಳಿದುಕೊಂಡು ತಮ್ಮ ಬದುಕಿನಲ್ಲಿ ಅಳವಿಸಿಕೊಳ್ಳಬೇಕೆಂದರು. 


    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ , ಬಸವಣ್ಣನವರು ಮಾನವ ಕುಲದ ಕಲ್ಯಾಣಕ್ಕಾಗಿ ಶ್ರಮಿಸಿದವರು. ಯಾವುದೇ ಒಂದು ಧರ್ಮ ಜಾತಿಗೆ ಸೀಮಿತರಾದವರಲ್ಲ. ಅಂಬೇಡ್ಕರ್ ಮತ್ತು ಬಸವಣ್ಣ ಈ ಇಬ್ಬರು ಮಹಾನ್ ನಾಯಕರು ನಮ್ಮೆಲ್ಲರಿಗೂ ಬೆಳಕಾಗಿದ್ದಾರೆ. ನಗರದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸುವ ಬಹಳ ವರ್ಷಗಳ ಬೇಡಿಕೆ ಈಡೇರುವುದು ಖಚಿತ ಎಂದರು.  
    ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ರಾಜ್ಯದ ಸಾಂಸ್ಕೃತಿ ನಾಯಕ ಬಸವಣ್ಣ ಎಂಬುದನ್ನು ಕಾಂಗ್ರೆಸ್ ಸರ್ಕಾರ ಮನವರಿಕೆ ಮಾಡಿಕೊಡುವ ಜೊತೆಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಅಳವಡಿಸಲು ಸೂಚಿಸಲಾಯಿತು. ಬಸವಣ್ಣನವರ ತತ್ವ, ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು. 
    ಪೊಲೀಸ್ ಉಪ ಅಧೀಕ್ಷಕ ಪ್ರಕಾಶ್ ರಾಥೋಡ್, ಗೌಡ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ವಿಜಯಕುಮಾರ್, ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್,  ಬಿ.ಕೆ ಮೋಹನ್ ಸೇರಿದಂತೆ ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟಿ.ಜಿ ಬಸವರಾಜಯ್ಯ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ್ ಸ್ವಾಗತಿಸಿದರು. 
    ಕಾರ್ಯಕ್ರಮ ಆರಂಭಕ್ಕೂ ಮೊದಲು ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಬಸವಣ್ಣನವರ ಭಾವಚಿತ್ರ ಹಾಗು ಅಂಬೇಡ್ಕರ್ ಜಾನಪದ ಕಲಾ ತಂಡ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.