ಪ್ರಸಕ್ತ ಸಾಲಿನಲ್ಲಿ ಲಯನ್ಸ್ ಕ್ಲಬ್‌ನಿಂದ ಹಲವಾರು ಉತ್ತಮ ಸೇವಾ ಕಾರ್ಯಗಳು : ನಾಗರಾಜ್ ಎಂ. ಶೇಟ್
ಭದ್ರಾವತಿ ಲಯನ್ಸ್ ಕ್ಲಬ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗೌರ್‍ನರ್ ಸಪ್ನಾ ಸುರೇಶ್ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ್ ಎಂ. ಶೇಟ್ ಸೇರಿದಂತೆ ಇನ್ನಿತರರು ಮಾತನಾಡಿದರು.
ಭದ್ರಾವತಿ : ಎಲ್ಲರ ಸಹಕಾರದಿಂದ ನಗರದ ಲಯನ್ಸ್ ಕ್ಲಬ್ ವತಿಯಿಂದ ಈ ಸಾಲಿನಲ್ಲಿ ಸಾಕಷ್ಟು ಸೇವಾ ಕಾರ್ಯಗಳನ್ನು ನೆರವೇರಿಸಲಾಗಿದ್ದು, ಮುಂದಿನ ಇದೆ ರೀತಿಯ ಸಹಕಾರ ನೀಡಬೇಕೆಂದು ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ್ ಎಂ. ಶೇಟ್ ಮನವಿ ಮಾಡಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ಶುದ್ಧ ಕುಡಿಯುವ ನೀರಿನ ಯಂತ್ರ, ಭಾವನಾತ್ಮಕ ಆರೋಗ್ಯ ಮತ್ತು ಯೋಗಕ್ಷೇಮ ಕುರಿತ ಕಾರ್ಯಾಗಾರ, ವನಮಹೋತ್ಸವ ಅಂಗವಾಗಿ ಪರಿಸರ ಕುರಿತು ಜಾಗೃತಿ ಕಾರ್ಯಕ್ರಮ, ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ಸಂಕಷ್ಟಕ್ಕೆ ಒಳಗಾದ ಸದಸ್ಯರಿಗೆ ನೆರವು, ಉಚಿತ ನೇತ್ರ ತಪಾಸಣೆ ಹಾಗು ಕನ್ನಡಕ ವಿತರಣೆ, ಕಾಲೇಜು ವಿದ್ಯಾರ್ಥಿಗಳೊಂದಿಗೆ ರಕ್ತದಾನ ಶಿಬಿರ ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು.
ಮೊದಲ ಜಿಲ್ಲಾ ಮಹಿಳಾ ಗೌರ್‍ನರ್ ಲಯನ್ಸ್ ಸಪ್ನಾ ಸುರೇಶ್ ಮಾತನಾಡಿ, ಸದಸ್ಯರೆಲ್ಲರೂ ಸೇವಾ ಮನೋಭಾವನೆಯೊಂದಿಗೆ ಒಗ್ಗಟ್ಟಾಗಿ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರು, ಅಶಕ್ತರು, ಮಹಿಳೆಯರು, ವಿದ್ಯಾಥಿಗಳಿಗಾಗಿ ಹೆಚ್ಚಿನ ಗಮನಹರಿಸಿ ವಿಭಿನ್ನ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿನಿಯರ ವೈಯಕ್ತಿಕ ಸ್ವಚ್ಛತೆಗಾಗಿ ಕಾಲೇಜುಗಳಲ್ಲಿ ಪ್ಯಾಡ್ ಬರ್ನರ್ ಯಂತ್ರ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ ೧೦೦೦ ಛತ್ರಿಗಳ ವಿತರಣೆ ಯೋಜನೆ ಸೇರಿದಂತೆ ಈ ರೀತಿಯ ಹಲವಾರು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಭದ್ರಾವತಿ ಸೇರಿದಂತೆ ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲಾ ಕ್ಲಬ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ಗೌರ್‍ನರ್ ಬಿ. ದಿವಾಕರ ಶೆಟ್ಟಿ, ವಲಯ ಮುಖ್ಯಸ್ಥ ಎ.ಎನ್ ಕಾರ್ತಿಕ್, ಡಾ. ಬೀರದಾರ್, ಕಾರ್ಯದರ್ಶಿ ಜಿ.ಪಿ ದರ್ಶನ್ ಮತ್ತು ಖಜಾಂಚಿ ಬಿ. ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.