ಮೇ.೩ರಂದು ಛಲವಾದಿಗಳ ಸಮಾಜದ ವಾರ್ಷಿಕೋತ್ಸವ, ಅಂಬೇಡ್ಕರ್ ಜಯಂತಿ
ಭದ್ರಾವತಿ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಿಂದ ಮೇ.೩ರಂದು ಸಂವಿಧಾನ ಶಿಲ್ಪಿ, ವಿಶ್ವಮಾನವ, ಭಾರತರತ್ನ ಡಾ. ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಹಾಗು ಸಮಾಜದ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಚನ್ನಪ್ಪ ಹಾಗು ಮುಖಂಡರು ಮಾಹಿತಿ ನೀಡಿದರು.
ಭದ್ರಾವತಿ : ತಾಲೂಕು ಛಲವಾದಿಗಳ(ಪ.ಜಾ) ಸಮಾಜದಿಂದ ಮೇ.೩ರಂದು ಸಂವಿಧಾನ ಶಿಲ್ಪಿ, ವಿಶ್ವಮಾನವ, ಭಾರತರತ್ನ ಡಾ. ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಹಾಗು ಸಮಾಜದ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ ಎಂದು ಸಮಾಜದ ಅಧ್ಯಕ್ಷ ಚನ್ನಪ್ಪ ತಿಳಿಸಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಬಾರಿ ಹಲವು ಆಶಯಗಳೊಂದಿಗೆ ಅಂಬೇಡ್ಕರ್‌ರವರ ಜಯಂತಿ ಜೊತೆಗೆ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ ಎಂದರು.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಸಂಜೆ ೫ ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರು ಉರಿಲಿಂಗ ಪದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿಯವರು ಪ್ರವಚನ ನೀಡಲಿದ್ದಾರೆ. ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಪ್ರತಿಭಾ ಪುರಸ್ಕಾರ ನೀಡಲಿದ್ದು, ಕೆಪಿಸಿಸಿ ಪದವಿಧರರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ನಗರದ ಹೊಸನಂಜಾಪುರ ಸಂಬುದ್ಧ ದಮ್ಮಾಂಕುರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದರು.
ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆವಹಿಸಲಿದ್ದು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಛಲವಾದಿಗಳ ಸಮಾಜದ ಜಿಲ್ಲಾಧ್ಯಕ್ಷ ಕುಮಾರ್ ಸ್ವಾಮಿ, ಸಮಾಜದ ಹಿರಿಯ ಮುಖಂಡ ಬಿ.ಡಿ ಸಾವಕ್ಕನವರ್ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮ ಬದರಿನಾರಾಯಣ, ಮಾಜಿ ಅಧ್ಯಕ್ಷೆ ಸರ್ವಮಂಗಳ ಭೈರಪ್ಪ, ನಗರಸಭೆ ಸದಸ್ಯೆ ಉದಯ ಕುಮಾರ್, ಸಮಾಜದ ಮಾಜಿ ಅಧ್ಯಕ್ಷರಾದ ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
ಸಮಾಜದ ನಿರ್ದೇಶಕ ಬದರಿನಾರಾಯಣ ಮಾತನಾಡಿ, ಸಮಾಜವನ್ನು ಮತ್ತಷ್ಟು ಸಂಘಟಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ಸಮಾಜದ ಎಲ್ಲರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಮಾಜದ ಮಾಜಿ ಅಧ್ಯಕ್ಷ, ಹಿರಿಯರಾದ ಎಸ್.ಎಸ್ ಭೈರಪ್ಪ ಮಾತನಾಡಿ, ಸಮಾಜದ ಬೆಳವಣಿಗೆ ಹೆಚ್ಚಿನ ಸಹಕಾರದ ಅಗತ್ಯವಿದೆ. ಕಾರ್ಯಕ್ರಮಕ್ಕೆ ಸಮಾಜ ಬಂಧುಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಸದಸ್ಯ ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಂ ಮಹಾದೇವಯ್ಯ, ಕಾರ್ಯದರ್ಶಿ ಲೋಕೇಶ್ ಮಾಳೇನಹಳ್ಳಿ, ಸದಸ್ಯ ಆರ್. ಅರುಣ್ ಉಪಸ್ಥಿತರಿದ್ದರು.
