ಅಂಬೇಡ್ಕರ್-ಬಾಬು ಜಗಜೀವನರಾಮ್ ಜಯಂತಿ ಒಟ್ಟಿಗೆ ಆಚರಿಸದ ತಾಲೂಕು ಆಡಳಿತ ವಿರುದ್ಧ ಅಸಮಾಧಾನ
ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲು ಬಾಪೂಜಿ ಹರಿಜನ ಸೇವಾ ಸಂಘ, ಡಿಎಸ್‌ಎಸ್ ಎಚ್ಚರಿಕೆ
ಭದ್ರಾವತಿ ಹಳೇನಗರ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಬಾಪೂಜಿ ಹರಿಜನ ಸೇವಾ ಸಂಘ, ಡಿಎಸ್‌ಎಸ್ ಮುಖಂಡರು ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಡಾ. ಬಾಬು ಜಗಜೀವನರಾಮ್‌ರವರ ಜಯಂತಿ ಒಟ್ಟಿಗೆ ಆಚರಣೆ ಮಾಡುವ ನಿಲುವಿನಿಂದ ಈ ಬಾರಿ ದೂರ ಸರಿದಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಈ ನಡುವೆಯೂ ಏ.೫ರಂದು ಆಯೋಜಿಸಲಾಗಿರುವ ಡಾ. ಬಾಬು ಜಗಜೀವನರಾಮ್‌ರವರ ಜಯಂತಿ ಹಾಗು ಏ.೧೪ರಂದು ನಡೆಯಲಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಜಯಂತಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಬಾಪೂಜಿ ಹರಿಜನ (ಮಾದರ) ಸೇವಾ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಮತ್ತು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯರಾದ ಶಿವಬಸಪ್ಪ ಮನವಿ ಮಾಡಿದರು.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್‌ರವರ ಹೋರಾಟ ಭಿನ್ನವಾಗಿದ್ದರೂ ಸಹ ಇಬ್ಬರ ನಿಲುವುಗಳು ಒಂದೇ ಆಗಿವೆ. ದಲಿತಪರವಾದ ನಿಲುವುಗಳನ್ನು ಹೊಂದಿದ್ದ ಈ ಮಹಾನ್ ವ್ಯಕ್ತಿಗಳ ಜನ್ಮದಿನ ನಗರದಲ್ಲಿ ಬಹಳ ವರ್ಷಗಳಿಂದ ಒಟ್ಟಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿನ ಜನರು ಅಂಬೇಡ್ಕರ್ ಮತ್ತು ಜಗಜೀವನರಾಮ್‌ರವರ ಜಯಂತಿ ಒಂದೇ ದಿನ ಎಂಬ ಭಾವನೆಯನ್ನು ಹೊಂದಿದ್ದಾರೆ. ಈ ನಡುವೆ ಇದೀಗ ಏಕಾಏಕಿ ಈ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ ಬೇರೆ ಬೇರೆಯಾಗಿ ಆಚರಿಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್‌ರವರ ಜಯಂತಿ ಬೇರೆ ಬೇರೆಯಾಗಿ ಆಚರಿಸುತ್ತಿರುವುದು ಸಮಾಜದಲ್ಲಿ ದಲಿತರ ನಡುವೆ ಸಮನ್ವಯದ ಕೊರತೆ ಬಿಂಬಿಸುತ್ತಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮದಿನ ಒಟ್ಟಿಗೆ ಆಚಸಲು ಮುಂದಾಗಬೇಕು. ಇದೀಗ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಯಾವುದೇ ರೀತಿ ವಿರೋಧ ವ್ಯಕ್ತಪಡಿಸುವುದಿಲ್ಲ. ಅಂಬೇಡ್ಕರ್ ಜಯಂತಿಯಂತೆ ಬಾಬು ಜಗಜೀವನರಾಮ್‌ರವರ ಜಯಂತಿ ಸಹ ನಡೆಯಬೇಕು. ದಲಿತರು, ಸಮಾಜ ಬಂಧುಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ತಕ್ಷಣ ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಬೇಕು. ಅಲ್ಲದೆ ಡಾ. ಬಾಬು ಜಗಜೀವನರಾಮ್‌ರವರ ಸುಸಜ್ಜಿತ ಭವನ ನಗರದಲ್ಲಿ ನಿರ್ಮಿಸಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಡಿಎಸ್‌ಎಸ್ ಪ್ರಮುಖರಾದ ತಾಲೂಕು ಸಂಚಾಲಕ ನಾಗರಾಜ್, ನ್ಯಾಯವಾದಿ ಎಂ. ಶಿವಕುಮಾರ್, ಶ್ರೀನಿವಾಸ್, ಕರಿಯಪ್ಪ, ಬಾಪೂಜಿ ಹರಿಜನ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಉಪಾಧ್ಯಕ್ಷ ಬಸವರಾಜಪ್ಪ, ಮಾರುತಿ, ಶೋಭಾ, ಜಯಣ್ಣ, ಕೃಷ್ಣಪ್ಪ, ಮಂಜುನಾಥ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.