ನಗರಸಭೆ ಸಾಮಾನ್ಯ ಸಭೆ : ಹಲವು ಪ್ರಸಾವನೆಗಳ ಕುರಿತು ಚರ್ಚೆ
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಹಲವು ಪ್ರಸ್ತಾವನೆಗಳ ಕುರಿತು ಚರ್ಚಿಸಲಾಯಿತು.
ಭದ್ರಾವತಿ : ಹಳೇನಗರದ ಗ್ರಾಮ ದೇವತೆ, ಆದಿ ದೇವತೆ ಶ್ರೀ ಹಳದಮ್ಮ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯ ವಿಜೇತರಿಗೆ ಬೆಳ್ಳಿಗದೆ ಬಹುಮಾನ ನೀಡುವುದು, ಎಲ್‌ಇಡಿ ಟಿವಿ ಪರದೆ ಅಳವಡಿಸುವುದು, ಕೆರೆ ಪುನಶ್ಚೇತನಗೊಳಿಸುವುದು, ಡಾ. ಬಾಬು ಜಗಜೀವನ್ ರಾಮ್‌ರವರ ಭವನ ನಿರ್ಮಿಸುವುದು, ನೀರಿನ ಕಂದಾಯ ಹೆಚ್ಚಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಶನಿವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.
ನಗರಸಭೆಯಲ್ಲಿ ಈಗಾಗಲೇ ಮುಕ್ತಾಯಗೊಂಡಿರುವ ವಾಹನ ಗುತ್ತಿಗೆಗಳನ್ನು ಮರುವಿಸ್ತರಿಸುವುದು, ವಿಡಿಯೋ ಕವರೇಜ್ ಮತ್ತು ಪೋಟೋ ಚಿತ್ರೀಕರಣ ಹಾಗು ಪೋಸ್ಟ್ ಕಾರ್ಡ್ ಅಳತೆಯ ಪೋಟೋ ಮುದ್ರಿಸಿ ಕೊಡುವುದು, ಬೀದಿ ದೀಪಗಳ ವಾರ್ಷಿಕ ನಿರ್ವಹಣೆ ಸೇರಿದಂತೆ ಹಲವಾರು ಗುತ್ತಿಗೆಗಳನ್ನು ಮುಂದುವರೆಸುವುದು, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಪಾವತಿಸುವುದು, ನಗರಸಭೆ ನೌಕರರಿಗೆ ವೈದ್ಯಕೀಯ ಚಿಕಿತ್ಸೆ ಭತ್ಯೆ ನೀಡುವುದು, ನಗರಸಭೆ ವ್ಯಾಪ್ತಿಯಲ್ಲಿರುವ ನಗರಸಭೆಗೆ ಹಸ್ತಾಂತರಗೊಂಡಿರುವ ಕೆರೆಗಳನ್ನು ಪುನಶ್ಚೇತನಗೊಳಿಸಿವುದು, ತ್ಯಾಜ್ಯ ನಿರ್ವಹಣೆಗೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು, ನಗರಸಭೆಯಿಂದ ಬೊಮ್ಮನಕಟ್ಟೆಯಲ್ಲಿ ನಿರ್ಮಿಸಲಾಗುತ್ತಿರುವ ಜಿ+ ೩ ಗುಂಪು ಮನೆಗಳ ಬಡಾವಣೆಗೆ ಹಿರಿಯ ಹೋರಾಟಗಾರ ದಿವಂಗತ ಡಿ.ಸಿ ಮಾಯಣ್ಣನವರ ಹೆಸರು ನಾಮಕರಣಗೊಳಿಸುವುದು, ೧೫ನೇ ಹಣಕಾಸು ಯೋಜನೆಯಡಿ ಅನುದಾನ ಹಂಚಿಕೆ ಮಾಡುವುದು, ೧೬ನೇ ಹಣಕಾಸು ಯೋಜನೆಯಡಿ ಮಂಜೂರಾಗಿರುವ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಕ್ರಿಯಾ ಯೋಜನೆ ತಯಾರಿಸುವುದು, ಸಿದ್ದಾಪುರದಲ್ಲಿರುವ ನಗರಸಭೆಗೆ ಸೇರಿದ ೨ ಎಕರೆ ಜಾಗಕ್ಕೆ ಬೇಲಿ ಹಾಕಿಸಿ ಬಂದೋಬಸ್ತ್ ಮಾಡುವುದು, ಪತ್ರಕರ್ತರಿಗೆ ೨ ಎಕರೆ ಜಾಗ ಗುರುತಿಸಿ ಬಡಾವಣೆ ನಿರ್ಮಿಸುವುದು ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಪೌರಾಯುಕ್ತ ಎನ್.ಕೆ ಹೇಮಂತ್, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಉಪಸ್ಥಿತರಿದ್ದರು.
