ಸಮುದಾಯದಾಯ ಕಲ್ಯಾಣದ ಜೊತೆಗೆ ಸದಸ್ಯರ ಮನೋಭಾವ ಬಲವರ್ಧನೆ : ಸಪ್ನಾ ಸುರೇಶ್
ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅಳವಡಿಸಲಾಗಿರುವ ಸುಮಾರು ೫೫,೦೦೦ ರು. ಮೌಲ್ಯದ ಸಾರ್ವಜನಿಕ ಗೋಡೆ ಗಡಿಯಾರ ಲಯನ್ಸ್ ಕ್ಲಬ್ ೩೧೭-ಸಿ, ಮೊದಲ ಜಿಲ್ಲಾ ಮಹಿಳಾ ಗೌರ್‍ನರ್ ಲಯನ್ಸ್ ಸಪ್ನಾ ಸುರೇಶ್ ಉದ್ಘಾಟಿಸಿದರು.
ಭದ್ರಾವತಿ: ಸಮುದಾಯದ ಕಲ್ಯಾಣಕ್ಕಾಗಿ ಮತ್ತು ಲಯನ್ಸ್ ಕ್ಲಬ್ ಸದಸ್ಯರ ಮನೋಭಾವ ಬಲಪಡಿಸುವ ನಿಟ್ಟಿನಲ್ಲಿ ಹಲವಾರು ಪರಿಣಾಮಕಾರಿ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸೇವಾ ಮನೋಭಾವನೆ ಹೊಂದಿರುವ ಕ್ಲಬ್‌ನ ಇಲ್ಲಿನ ತಂಡಕ್ಕೆ ಈ ಸೇವಾ ಕಾರ್ಯಗಳು ಸಂತೃಪ್ತಿ ಉಂಟು ಮಾಡಿವೆ ಎಂದು ಲಯನ್ಸ್ ಕ್ಲಬ್ ೩೧೭-ಸಿ, ಮೊದಲ ಜಿಲ್ಲಾ ಮಹಿಳಾ ಗೌರ್‍ನರ್ ಲಯನ್ಸ್ ಸಪ್ನಾ ಸುರೇಶ್ ಹೇಳಿದರು.
ಅವರು ನಗರದ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿ ವಿವಿಧೆಡೆ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರು. ನಗರದ ಬಿ.ಎಚ್ ರಸ್ತೆ ಮೀನು ಮಾರುಕಟ್ಟೆ ಬಳಿ ಮರುಸ್ಥಾಪಿಸಲಾಗಿರುವ ಫಲಕ ಉದ್ಘಾಟಿಸಿ, ಈ ಫಲಕ ನಗರದಲ್ಲಿ ಲಯನ್ಸ್‌ಕ್ಲಬ್ ಗೋಚರತೆ ಮತ್ತು ಸಾರ್ವಜನಿಕ ಗುರುತನ್ನು ಹೆಚ್ಚಿಸುತ್ತದೆ ಎಂದರು.
ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅಳವಡಿಸಲಾಗಿರುವ ಸುಮಾರು ೫೫,೦೦೦ ರು. ಮೌಲ್ಯದ ಸಾರ್ವಜನಿಕ ಗೋಡೆ ಗಡಿಯಾರ ಉದ್ಘಾಟಿಸಿ, ಈ ಗಡಿಯಾರ ಸಾವಿರಾರು ದೈನಂದಿನ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಕ್ಲಬ್ ಸದಸ್ಯರ ಉದಾರ ಬೆಂಬಲ ಮತ್ತು ಪ್ರಾಯೋಜಕತ್ವದಿಂದ ಮತ್ತು ಪಿಎಸ್‌ಟಿ ತಂಡದ ಸಮರ್ಪಿತ ಪ್ರಯತ್ನಗಳಿಂದ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ತಾಲೂಕಿನ ಅರಬಿಳಚಿ ಕ್ಯಾಂಪ್‌ನಲ್ಲಿರುವ ನಿರ್ಗತಿಕ ಕುಟುಂಬಕ್ಕೆ ಲಯನ್ಸ್ ಶೆಲ್ಟರ್ ಸಪೋರ್ಟ್ ಪ್ರಾಜೆಕ್ಟ್ (ಡಿಜಿ ವಿಷನ್ ಪ್ರೋಗ್ರಾಂ-ಡ್ರೀಮ್ ಕುಟೀರ) ಯೋಜನೆಯಡಿ ಆಶ್ರಯ ಕಲ್ಪಿಸಿಕೊಳ್ಳಲು ೧,೦೦,೦೦೦ ರು. ಆರ್ಥಿಕ ನೆರವು ನೀಡಲಾಗಿದೆ. ಈ ಕಾರ್ಯ ಕ್ಲಬ್ ಸದಸ್ಯರ ಮಾನವೀಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದರು.
ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ೬೦,೦೦೦ ರು. ಮೌಲ್ಯದ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಯಂತ್ರ ಸ್ಥಾಪಿಸಲಾಗಿದೆ.
ತಾಲೂಕಿನ ಎರೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಕ್ಲಬ್ ವತಿಯಿಂದ ಧ್ವಜಸ್ತಂಭ ನಿರ್ಮಾಣ ಮಾಡಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ಸಾಂಸ್ಥಿಕ ಹೆಮ್ಮೆಯನ್ನು ಉತ್ತೇಜಿಸುತ್ತದೆ. ಡಿಜಿ ವಿಷನ್ ಕಾರ್ಯಕ್ರಮದಡಿ `ಶುದ್ಧ ಜಲ' ಕಲ್ಪಿಸಲು ನೀರಿನ ಫಿಲ್ಟರ್ ಅಳವಡಿಸಲಾಗಿದೆ. ನ್ಯೂಟೌನ್ ಸರ್.ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ೬೦,೦೦೦ ರು. ಮೌಲ್ಯದ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಯಂತ್ರ ಸ್ಥಾಪಿಸಲಾಗಿದೆ. ಇದು ವಿದ್ಯಾರ್ಥಿನಿಯರ ವೈಯಕ್ತಿಕ ಸ್ವಚ್ಛತೆ ಹಾಗು ನೈರ್ಮಲ್ಯಕ್ಕೆ ಸಹಕಾರಿಯಾಗಿದೆ ಎಂದರು.
ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಜನ ಸೇವಾ ಟ್ರಸ್ಟ್ ಹೋಮ್ ಆಫ್ ಹೋಮ್ ವೃದ್ದಾಶ್ರಮಕ್ಕೆ ೧೦,೦೦೦ ರು. ಮೌಲ್ಯದ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ೧೮,೦೦೦ ರು. ಮೌಲ್ಯದ ಆಸ್ಪತ್ರೆ ಹಾಸಿಗೆ ಮತ್ತು ಕಮೋಡ್ ಹಾಗು ಕುರ್ಚಿಗಳನ್ನು ಒದಗಿಸಲಾಗಿದ್ದು, ಇದು ನಮ್ಮ ಹಿರಿಯ ನಾಗರೀಕರ ಮೇಲಿನ ಕಾಳಜಿಯನ್ನು ತೋರಿಸುತ್ತದೆ ಎಂದರು.
ನಿರ್ಗತಿಕ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಗಿದ್ದು, ಜೀವನೋಪಾಯ ಬೆಂಬಲದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಇದರ ಉದ್ದೇಶವಾಗಿದೆ. "ನೆರಲು" ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ, ಬಿಸಿಲು ಮತ್ತು ಮಳೆಯ ಹೊರತಾಗಿಯೂ ಮಾರಾಟಗಾರರು ತಮ್ಮ ಕೆಲಸವನ್ನು ಮುಂದುವರಿಸಲು ನೆರವಾಗುತ್ತದೆ. ಪ್ರತಿಯೊಬ್ಬರು ಇಂತಹ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ್ ಎಂ. ಶೇಟ್, ಮಾಜಿ ಜಿಲ್ಲಾ ಗೌರ್‍ನರ್ ಬಿ. ದಿವಾಕರ ಶೆಟ್ಟಿ, ವಲಯ ಮುಖ್ಯಸ್ಥ ಎ.ಎನ್ ಕಾರ್ತಿಕ್, ಡಾ. ಬೀರದಾರ್, ಕಾರ್ಯದರ್ಶಿ ಜಿ.ಪಿ ದರ್ಶನ್ ಮತ್ತು ಖಜಾಂಚಿ ಬಿ. ನಟರಾಜ್ ಹಾಗು ಪ್ರಮುಖರಾದ ಡಾ. ರವೀಂದ್ರನಾಥ ಕೋಠಿ, ಭುವನೇಶ್ವರ್, ಎಚ್.ಬಿ ನಾಗರಾಜ್, ಎಲ್. ದೇವರಾಜ್, ಜಯಂತಿ ನಾಗರಾಜ್, ಶಂಕರಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
.jpeg)