ಬಿಜೆಪಿ ಪಕ್ಷದಿಂದ ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಜನ್ಮದಿನ ಆಚರಣೆ
ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷದಿಂದ ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು.
ಭದ್ರಾವತಿ: ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಭಾರತೀಯ ಜನತಾ ಪಕ್ಷದಿಂದ ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು.
ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ಮತ್ತು ಎಸ್.ಸಿ ಮೋರ್ಚಾ ವತಿಯಿಂದ ಬೆಳಿಗ್ಗೆ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ನಂತರ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್‌ವರು ಮುಂಬೈ, ಅಮೇರಿಕ ಮತ್ತು ಲಂಡನ್ ವಿಶ್ವವಿದ್ಯಾಲಯಗಳಿಂದ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಕಾನೂನು ಶಾಸ್ತ್ರಗಳಲ್ಲಿ ಉನ್ನತ ಪದವಿಯನ್ನು ಪಡೆದಿದ್ದಾರೆ. ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದರು. ಇಡೀ ವಿಶ್ವದಲ್ಲಿ ಶ್ರೇಷ್ಠವಾದ ಸಂವಿಧಾನ ನೀಡಿದ ಮಹನೀಯರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.
ಸಾಮಾಜಿಕ ಕ್ಷೇತ್ರ ಹಾಗೂ ಸಂಸದೀಯ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಬಾಲ್ಯದಿಂದ ಅನುಭವಿಸಿದ್ದ ಕಷ್ಟ ಹಾಗೂ ಅವಮಾನಗಳು ಮತ್ತೆ ಮರುಕಳಿಸಬಾರದು ಎಂಬ ದೂರ ದೃಷ್ಟಿಯಿಂದ ಹಿಂದುಳಿದ ಜಾತಿ ಹಾಗೂ ವರ್ಗಗಳಿಗೆ ಮೀಸಲಾತಿಯನ್ನು ನೀಡಿ ಗೌರವ ನೀಡಿದ್ದಾರೆ. ಅವರು ಒಬ್ಬ ವ್ಯಕ್ತಿಯಲ್ಲ ಒಂದು ದೊಡ್ಡ ಅದ್ಭುತ ಶಕ್ತಿ ಎಂದರು.
ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅನ್ನಪೂರ್ಣ ಮಾತನಾಡಿ, ಅಂಬೇಡ್ಕರ್‌ರವರನ್ನು ಕೇವಲ ಅವರ ಜನ್ಮ ದಿನದಂದು ಮಾತ್ರವಲ್ಲ ಪ್ರತಿ ದಿನ, ಪ್ರತಿಕ್ಷಣವೂ ಸ್ಮರಿಸಬೇಕಾದ ವ್ಯಕ್ತಿತ್ವ ಅವರದು. ಮಹಿಳೆ ಹಾಗೂ ಪುರುಷ ಎಲ್ಲರಿಗೂ ಸಮಾನ ಸ್ವಾತಂತ್ರ್ಯ ನೀಡಿದ ಮಹನೀಯರು. ಬಾಲ್ಯದಲ್ಲಿ ಅಸ್ಪೃಶ್ಯತೆಯ ಅವಮಾನ, ನೋವು, ಸಮಾಜಕ್ಕೆ ಮಾರಕವಾಗಿದ್ದ ಪಿಡುಗುಗಳ ನಿರ್ಮೂಲನೆಗಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಇವುಗಳ ಮೂಲಕ ಸಮಾಜದ ಸುಧಾರಣೆಗೆ ಮುಂದಾದರು ಎಂದರು.
ಕಾರ್ಯಕ್ರಮದಲ್ಲಿ ಸಂಚಾಲಕ ಛಲವಾದಿ ಆರ್. ಕೃಷ್ಣ, ಎಸ್.ಸಿ ಮೋರ್ಚಾ ಅಧ್ಯಕ್ಷ ರವಿನಾಯ್ಕ, ಎಸ್.ಟಿ ಮೋರ್ಚಾ ಅಧ್ಯಕ್ಷ ಪುರುಷೋತ್ತಮ್, ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಶಕುಂತಲಾ ಪ್ರದೀಪ್, ಮುಖಂಡರಾದ ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಸರಸ್ವತಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘು ರಾವ್, ಹನುಮಂತ ನಾಯ್ಕ, ವಿವಿಧ ಮೋರ್ಚಾಗಳ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ, ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

.jpeg)