ಬೀದಿಬದಿ ವ್ಯಾಪಾರಿಗಳ ಸಂಕಷ್ಟಕ್ಕೆ ಸ್ಪಂದನೆ ಉತ್ತಮ ಕಾರ್ಯ : ಪ್ರಭುಲಿಂಗ ಕವಳಿಕಟ್ಟೆ


ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಛತ್ರಿ ವಿತರಣಾ ಸಮಾರಂಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಛತ್ರಿಗಳನ್ನು ವಿತರಿಸಿದರು. 
    ಭದ್ರಾವತಿ: ಬೇಸಿಗೆಯಲ್ಲಿ ಬೀದಿಬದಿ ವ್ಯಾಪಾರಿಗಳು ಪಡುವ ಕಷ್ಟಗಳಿಗೆ ಪೂರಕವಾಗಿ ಸ್ಪಂದಿಸಿ ಅವರುಗಳಿಗೆ ಉಚಿತವಾಗಿ ಛತ್ರಿಗಳನ್ನು ವಿತರಿಸುತ್ತಿರುವುದು ರೋಟರಿ ಕ್ಲಬ್ ಮಾನವೀಯತೆಗೆ ಹಿಡಿತ ಕನ್ನಡಿಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಪ್ರಶಂಸೆ ವ್ಯಕ್ತಪಡಿಸಿದರು. 
    ಅವರು ಬುಧವಾರ ಸಂಜೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಛತ್ರಿ ವಿತರಣಾ ಸಮಾರಂಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಿ ಮಾತನಾಡಿದರು. 
    ಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನವೀಯತೆಯಾಗಿದ್ದು, ಸಮಾಜದಲ್ಲಿ ಆರ್ಥಿಕವಾಗಿ, ದೈಹಿಕವಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಒಂದು ಉತ್ತಮ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಹಲವಾರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿದೆ ಎಂದರು. 
    ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಚ್ ಶಿವಕುಮಾರ್ ಅಧ್ಯಕ್ಷತೆವಹಿಸಿದ್ದರು. ವಲಯ-೧೦, ರೋಟರಿ ೩೧೮೨ರ ಸಹಾಯಕ ಜಿಲ್ಲಾ ಗೌರ್‍ನರ್ ಕೆ.ಪಿ ಶೆಟ್ಟಿ, ರೋಟರಿ ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ಕೂಡ್ಲಿಗೆರೆ ಹಾಲೇಶ್, ಆನ್ಸ್ ಕ್ಲಬ್ ಅಧ್ಯಕ್ಷೆ ಸವಿತ ಲೋಡ, ಕಾರ್ಯದರ್ಶಿ ಸವಿತ ಶಾಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ರೋಟರಿ ಮಾಜಿ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೇಶವಮೂರ್ತಿ ವಂದಿಸಿದರು. ಸುಮಾರು ೬೦ ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಲಾಯಿತು.