ಭಗವಾನ್ ಗೌತಮ ಬುದ್ಧ ಜಯಂತಿ ಆಚರಿಸದೆ ಬೇಜವಾಬ್ದಾರಿತನ : ಖಂಡನೆ
ತಾಲೂಕು ಆಡಳಿತದ ವಿರುದ್ದ ಡಿಎಸ್‌ಎಸ್ ಮುಖಂಡ ಶಿವಬಸಪ್ಪ ಆಕ್ರೋಶ
ಭದ್ರಾವತಿ : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಭಗವಾನ್ ಗೌತಮ ಬುದ್ಧ ಜಯಂತಿ ಆಚರಿಸದೆ ಬೇಜವಾಬ್ದಾರಿತನದಿಂದ ವರ್ತಿಸುವ ಮೂಲಕ ಸರ್ಕಾರದ ಸುತ್ತೋಲೆ ಕಡೆಗಣಿಸಿದೆ ಎಂದು ನಿವೃತ್ತ ಪ್ರಾಚಾರ್ಯ, ಡಿಎಸ್‌ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಬಸಪ್ಪ ಆರೋಪಿಸುವ ಮೂಲಕ ತಾಲೂಕು ಆಡಳಿತದಿಂದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವಕ್ಕೆ ಸತ್ಯ, ಅಹಿಂಸೆ ಹಾಗೂ ಶಾಂತಿಯನ್ನು ಬೋಧಿಸಿದ ಗೌತಮ ಬುದ್ಧನ ಜನ್ಮದಿನ ಮೇ.೧ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೂಡ ಮೇ.೧ ಬುದ್ಧ ಪೂರ್ಣಿಮೆ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲಾಡಳಿತ ಮತ್ತು ತಾಲೂಕ್ ಆಡಳಿತ ಮಟ್ಟದಲ್ಲಿ ಬುದ್ಧ ಜಯಂತಿ ಆಚರಿಸಲು ಸುತ್ತೋಲೆ ಹೊರಡಿಸಿದೆ. ಶಿವಮೊಗ್ಗ ಜಿಲ್ಲಾಡಳಿತ ಮತ್ತು ಜಿಲ್ಲೆಯ ಇತರ ತಾಲೂಕು ಆಡಳಿತದ ಆಶ್ರಯದಲ್ಲಿ ಮೇ ೧ರಂದು ಬುದ್ಧ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಆದರೆ ಇಲ್ಲಿನ ತಾಲೂಕು ಆಡಳಿತ ಮಾತ್ರ ತನಗೆ ಬುದ್ಧ ಪೂರ್ಣಿಮೆ ಪ್ರಯುಕ್ತ ಬುದ್ಧ ಜಯಂತಿ ಆಚರಣೆ ಬಗ್ಗೆ ಸರ್ಕಾರದಿಂದ ಮಾಹಿತಿಯೇ ಇಲ್ಲವೇನೋ ಎಂಬಂತೆ ಬೇಜವಾಬ್ದಾರಿತನದಿಂದ ವರ್ತಿಸಿರುವುದು ಖಂಡನೀಯ.
ತಾಲೂಕು ಆಡಳಿತದ ಈ ನಡೆ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಯ ಪಾಠ ಹೇಳಿಕೊಟ್ಟ ವಿಶ್ವಗುರು ಗೌತಮ ಬುದ್ಧನಿಗೆ ಎಸಗಿದ ಅಪಚಾರವಾಗಿದೆ. ಇದನ್ನು ಡಿಎಸ್‌ಎಸ್ ತೀವ್ರವಾಗಿ ಖಂಡಿಸುತ್ತಿದ್ದು, ತಾಲೂಕು ಆಡಳಿತದ ವಿರುದ್ಧದ ಹೋರಾಟ ನಡೆಸಬೇಕಾಗತ್ತದೆ ಎಂದು ಎಚ್ಚರಿಸಿದ್ದಾರೆ.
