ಚಾಕುವಿನಿಂದ ಇರಿದು ಹತ್ಯೆಗೆ ಯತ್ನ ಪ್ರಕರಣ : ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ 


ಭದ್ರಾವತಿ : ತಾಲೂಕಿನ ಕೊಮಾರನಹಳ್ಳಿ ತಾಂಡದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ೫ ವರ್ಷಗಳ ಹಿಂದೆ ನಡೆದಿದ್ದ ಇಬ್ಬರಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗು ದಂಡ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
    ಆರೋಪಿಗಳಾಗಿರುವ ಕೊಮಾರನಹಳ್ಳಿ ತಾಂಡ ನಿವಾಸಿಗಳಾದ ರವಿನಾಯ್ಕ(೩೨), ದಿವಂಗತ ರಾಜನಾಯ್ಕ (೫೮) ಮತ್ತು ಲಕ್ಷ್ಮಿಬಾಯಿ(೪೦) ರವರು ಆಸ್ತಿಯ ಭಾಗದ ವಿಚಾರವಾಗಿ  ೩ ಜೂನ್ ೨೦೨೧ರಂದು ರಾತ್ರಿ ಶರತ್(೨೪), ಸುರೇಂದ್ರ(೪೫), ವಿನಯ್ ಕುಮಾರ್(೨೧), ಜಯಬಾಯಿ(೫೫) ಮತ್ತು ಸರೋಜಾ ಬಾಯಿ(೪೧) ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಶರತ್‌ರವರ ಹೊಟ್ಟೆಗೆ ೨-೩ ಬಾರಿ ಇರಿದು ತೀವ್ರ ಸ್ವರೂಪದ ಗಾಯಪಡಿಸಿ ಕೊಲೆ ಮಾಡಲು ಯತ್ನಿಸಲಾಗಿತ್ತು. ಈ ಘಟನೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿ ಎಎಸ್‌ಐ(ನಿವೃತ್ತ) ಕೆ.ಕೆ ತ್ಯಾಗರಾಜ್ ರವರು ಪ್ರಕರಣದ ತನಿಖೆ ಪೂರೈಸಿ, ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.  
     ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ವಾದ ಮಂಡಿಸಿದ್ದು, ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ವರು ಆರೋಪಿ ರವಿನಾಯ್ಕನಿಗೆ ೮ ವರ್ಷ ಕಠಿಣ ಕಾರಾಗೃಹ ವಾಸ ಮತ್ತು ೨,೦೦,೦೦೦ ರು. ದಂಡವನ್ನು ವಿಧಿಸಿದ್ದು, ಉಳಿದ ಇಬ್ಬರು ಆರೋಪಿತರಿಗೆ  ೨ ವರ್ಷ ಕಠಿಣ ಕಾರಾಗೃಹ ವಾಸ ಮತ್ತು ತಲಾ ೨೦,೦೦೦ ರು. ದಂಡವನ್ನು ವಿಧಿಸಿದ್ದು, ನೊಂದವರಾದ ಶರತ್ ಕುಮಾರ್ ರವರಿಗೆ ೨,೦೦,೦೦೦ ರೂ ಪರಿಹಾರ ಕೊಡಲು ಆದೇಶಿಸಿರುತ್ತದೆ.
     ಇದೇ ಪ್ರಕರಣದಲ್ಲಿ ರವಿನಾಯ್ಕ ಮೇಲೆ ಚಾಕುವಿನಿಂದ ಸರೋಜಾ ಬಾಯಿ, ವಿನಯ್ ಕುಮಾರ್ ಮತ್ತು ಶರತ್ ಎಂಬುವರು ಎರಡು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ೪ನೇ ಹೆಛಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶರತ್‌ಗೆ ೮ ವರ್ಷ ಶಿಕ್ಷೆ, ೨,೩೧,೦೦೦ ರೂ ದಂಡ ವಿಧಿಸಿದರೆ, ವಿನಯ್ ಮತ್ತು ಸರೋಜಾ ಬಾಯಿಗೆ ಮೂರು ವರ್ಷ ಶಿಕ್ಷೆ ೬೨ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.