ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ ಸುಸ್ಸಜ್ಜಿತ ಕಾರ್ಮಿಕರ ಸಮುದಾಯ ಭವನ
* ಅನಂತಕುಮಾರ್
ಭದ್ರಾವತಿ ಕಸಬಾ ಹೋಬಳಿ, ಉಜ್ಜಯಿನಿಪುರ ಗ್ರಾಮದ ಸರ್ವೇ ನಂ. ೨೦ರಲ್ಲಿ ನಿರ್ಮಿಸಲಾಗಿರುವ ಸುಸ್ಸಜಿತ ಕಾರ್ಮಿಕ ಸಮುದಾಯ ಭವನ.
ಮುಖ್ಯಾಂಶಗಳು:
- ಸುಮಾರು ೯.೫ ಕೋ.ರು. ವೆಚ್ಚದ ಸಮುದಾಯ ಭವನ.
- ೧ ವರ್ಷದ ಹಿಂದೆ ಉದ್ಘಾಟನೆ. ಬಹುಬೇಡಿಕೆಯ ಸಮುದಾಯ ಭವನ
- ಸಾಮಾನ್ಯ ಹಾಗು ಬಡ ಕಾರ್ಮಿಕರು ಸೇರಿದಂತೆ ಮಧ್ಯಮ ವರ್ಗಕ್ಕೆ ಹೆಚ್ಚಿನ ಅನುಕೂಲ.
- ಎಲ್ಲಾ ಮೂಲ ಸೌಲಭ್ಯಗಳನ್ನು ಒಳಗೊಂಡಿರುವ ವಿಶಾಲ ಕಟ್ಟಡ
- ಸೂಕ್ತ ನಿರ್ವಹಣೆ ಹಲವು ಸಮಸ್ಯೆಗಳು ಉಲ್ಬಣ.
ಭದ್ರಾವತಿ : ಕಾರ್ಮಿಕರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಬಹಳ ವರ್ಷಗಳ ಬೇಡಿಕೆಯಾಗಿದ್ದ ಕಾರ್ಮಿಕರ ಸಮುದಾಯ ಭವನ ನಿರ್ಮಾಣಗೊಂಡು ಕಳೆದ ೧ ವರ್ಷದ ಹಿಂದೆ ಉದ್ಘಾಟನೆಗೊಂಡಿದೆ. ಸುಮಾರು ೯.೫ ಕೋ.ರು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಸಮುದಾಯ ಭವನ ಎಲ್ಲಾ ವರ್ಗದ ಕಾರ್ಮಿಕರು, ಮಧ್ಯಮ ಹಾಗು ಬಡ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಈ ನಡುವೆ ಸಮರ್ಪಕವಾದ ನಿರ್ವಹಣೆ ಇಲ್ಲದೆ ಸಮುದಾಯ ಭವನ ಹಾಳಾಗುತ್ತಿದ್ದು, ತಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಕ್ಷೇತ್ರಕ್ಕೆ ಬೇರೆಡೆಯಿಂದ ಬರುವ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿಕೊಡಲು, ಕಾರ್ಮಿಕ ವರ್ಗದವರು ಮತ್ತು ಸರ್ಕಾರದ ವಿವಿಧ ಇಲಾಖೆಗಳು, ಶಾಲಾ-ಕಾಲೇಜುಗಳು, ಸಭೆ-ಸಮಾರಂಭಗಳನ್ನು ನಡೆಸಲು ಹಾಗು ಕಾರ್ಮಿಕರು ಮತ್ತು ಮಧ್ಯಮ ಹಾಗು ಬಡ ವರ್ಗದವರು ಮದುವೆ ಸೇರಿದಂತೆ ಶುಭಾ ಸಮಾರಂಭಗಳನ್ನು ನಡೆಸಲು ಅನುಕೂಲವಾಗುವಂತೆ ಹಲವು ದೃಷ್ಟಿಕೋನಗಳೊಂದಿಗೆ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲಾಗಿದೆ. ಈ ನಿಟ್ಟಿನಲ್ಲಿಯೇ ಸಮುದಾಯ ಭವನವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೀಗ ಸುಸಜ್ಜಿತ ಸಮುದಾಯ ಭವನ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನಿರ್ಮಾಣ :
ಕಸಬಾ ಹೋಬಳಿ, ಉಜ್ಜಯಿನಿಪುರ ಗ್ರಾಮದ ಸರ್ವೇ ನಂ. ೨೦ರಲ್ಲಿ ಸುಸ್ಸಜಿತ ಕಾರ್ಮಿಕ ಸಮುದಾಯ ಭವನ ನಿರ್ಮಿಸಲಾಗಿದೆ. ಮುಖ್ಯ ಆಡಳಿತಾಧಿಕಾರಿಗಳು, ದಿ ಮೈಸೂರ್ ಪೇಪರ್ ಮಿಲ್ಸ್ ಲಿಮಿಟೆಡ್‌ರವರು ಕ್ಷೇತ್ರದಲ್ಲಿರುವ ಕಾರ್ಮಿಕರು ಮತ್ತು ಅವರ ಅವಲಂಬಿತರ ಉಪಯೋಗಕ್ಕೆ ಸರ್ವೇ ನಂ. ೨೦. ಕಸಬಾ ಹೋಬಳಿ, ಉಜ್ಜಯಿನಿಪುರದಲ್ಲಿ ಕಾರ್ಖಾನೆಗೆ ಸೇರಿದ ೬೭ ಎಕರೆ ೧೨ ಗುಂಟೆ ಭೂ ಭಾಗದಲ್ಲಿ ೨ ಎಕರೆ ಜಮೀನನ್ನು ಸಮುದಾಯ ಭವನ ನಿರ್ಮಿಸಲು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ನೀಡಿರುತ್ತಾರೆ.
ಕ್ಷೇತ್ರದಲ್ಲಿ ಮಂಡಳಿಗೆ ವಂತಿಕೆ ಪಾವತಿಸುವ ಹಾಗು ಸುತ್ತಮುತ್ತಲಿನ ಸಂಘಟಿತ ಕಾರ್ಮಿಕರು ಹಾಗೂ ಅವರ ಅವಲಂಬಿತರ ಉಪಯೋಗಕ್ಕೆ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಸಮುದಾಯ ಭವನದ ಅವಶ್ಯಕತೆ ಇರುವುದನ್ನು ಮನಗಂಡು ೯.೫ ಕೋ. ರು. ಮೊತ್ತದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲು ಮಂಡಳಿಯ ೯೪ನೇ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿತ್ತು. ೨೮ ಜೂನ್ ೨೦೨೨ರಲ್ಲಿ ಅಂದಿನ ಕಾರ್ಮಿಕ ಸಚಿವರಾಗಿದ್ದ ಶಿವರಾಂ ಹೆಬ್ಬಾರ್ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಕೆ.ಸಿ ನಾರಾಯಣಗೌಡರವರು ಭೂಮಿ ಪೂಜೆ ನೆರವೇರಿಸಿದ್ದರು. ಸುಮಾರು ೩ ವರ್ಷಗಳ ನಂತರ ಸುಸಜ್ಜಿತ ಸಮುದಾಯ ಭವನ ೪ ಆಗಸ್ಟ್ ೨೦೨೫ರಂದು ಇಂದಿನ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಉದ್ಘಾಟಿಸಿದರು.
ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತವಾದ ಕಟ್ಟಡ:
ನಗರದ ಪ್ರಮುಖ ರಾಷ್ಟ್ರೀಯ ಹೆದ್ದಾರಿ(ಬೈಪಾಸ್ ರಸ್ತೆ) ಪಕ್ಕದಲ್ಲಿ ಈ ಸಮುದಾಯ ಭವನವಿದ್ದು, ವಿಶಾಲವಾದ ಖಾಲಿ ಭೂ ಭಾಗ ಒಳಗೊಂಡಿದೆ. ಇದರಿಂದಾಗಿ ವಾಹನಗಳ ನಿಲುಗಡೆಗೆ ಯಾವುದೇ ಸಮಸ್ಯೆ ಇಲ್ಲ. ನಗರದ ಪ್ರಮುಖ ಸಮುದಾಯ ಭವನಗಳ ಸಾಲಿನಲ್ಲಿ ಈ ಸಮುದಾಯ ಭವನ ಸಹ ಸೇರ್ಪಡೆಗೊಂಡಿದೆ. ಸುಮಾರು ೧ ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಬಹುದಾದ ಹಾಗು ಬೃಹತ್ ವೇದಿಕೆ ಹೊಂದಿರುವ ಸಭಾಂಗಣ ಒಳಗೊಂಡಿದೆ. ಉಳಿದುಕೊಳ್ಳಲು ಹೆಚ್ಚಿನ ಕೊಠಡಿಗಳು, ಕುಡಿಯುವ ನೀರು, ಶೌಚಾಲಯ, ಪಾಕ ಶಾಲೆ ಸಹ ಒಳಗೊಂಡಿದೆ. ಕಾರ್ಮಿಕರ ಕಲ್ಯಾಣ ಮಂಡಳಿ ಸುಮಾರು ೯೪ ಲಕ್ಷ ರು. ವೆಚ್ಚದಲ್ಲಿ ಪಾಕೋಪಕರಣ ಹಾಗೂ ಪೀಠೋಪಕರಣಗಳ ಸೌಲಭ್ಯವನ್ನು ಒದಗಿಸಿದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಕಾರ್ಮಿಕರ ಸಮುದಾಯ ಭವನ ಹೆಚ್ಚು ಗಮನ ಸೆಳೆಯುತ್ತಿದ್ದು, ಸಭೆ, ಸಮಾರಂಭಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.
ಸೂಕ್ತ ನಿರ್ವಹಣೆ ಇಲ್ಲದೆ ಸಮಸ್ಯೆಗಳು ಉಲ್ಬಣ:
ಸೂಕ್ತ ನಿರ್ವಹಣೆ ಇಲ್ಲದ ಹಿನ್ನಲೆಯಲ್ಲಿ ಬಹುಮುಖ್ಯವಾಗಿ ಸ್ವಚ್ಛತೆ ಸಮಸ್ಯೆ ಎದುರಾಗಿದೆ. ಶೌಚಾಲಯ ಗುಂಡಿಗಳು ತುಂಬಿ ಹೋಗಿ ದುರ್ವಾಸನೆ ಬೀರುತ್ತಿದೆ. ಪೀಠೋಪಕರಣಗಳು ಮುರಿದು ಹೋಗಿ ಹಾಳಾಗುತ್ತಿವೆ. ಕುಡಿಯುವ ನೀರಿನ ಟ್ಯಾಂಕ್ ಸುತ್ತಮುತ್ತ ಸ್ವಚ್ಛತೆ ಇಲ್ಲವಾಗಿದೆ. ಸಮುದಾಯ ಭವನದಲ್ಲಿ ಬಳಕೆಯಾದ ನೀರು ಚರಂಡಿ ಮೂಲಕ ಹೊರಗೆ ಹೋಗದೆ ಕಸಕಡ್ಡಿ ಕಟ್ಟಿಕೊಂಡು ದುರ್ವಾಸನೆ ಬೀರುತ್ತಿದೆ. ಈ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಪರಿಸ್ಥಿತಿ ಇದೆ ರೀತಿ ಮುಂದುವರೆದರೆ ಸುಸಜ್ಜಿತವಾದ ಸಮುದಾಯ ಭವನ ಹಾಳಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೆಲವರು ಕಾರ್ಮಿಕರ ಕಲ್ಯಾಣ ಮಂಡಳಿ ಸಮುದಾಯ ಭವನ ನಿರ್ವಹಣೆಯನ್ನು ನಗರಸಭೆಗೆ ವಹಿಸಿಕೊಡದ ಹಿನ್ನಲೆಯಲ್ಲಿ ಸಮಸ್ಯೆಗಳು ಉಲ್ಬಣಗೊಂಡಿವೆ ಎಂದು ದೂರಿದ್ದಾರೆ. ಪ್ರಸ್ತುತ ಸಮುದಾಯ ಭವನದಲ್ಲಿ ನಿರ್ವಹಣೆ ಬಗ್ಗೆ ಅರಿವಿಲ್ಲದ ಹಾಗು ಮನಬಂದಂತೆ ವರ್ತಿಸುವವರನ್ನು ನೇಮಿಸಲಾಗಿದೆ. ನಿರ್ವಹಣೆಯನ್ನು ಸಂಬಂಧಪಟ್ಟ ಇಲಾಖೆಯವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಇನ್ನೂ ಕೆಲವರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ.
