ಉತ್ತಮ ಮಾರ್ಗದಿಂದ ಮನುಷ್ಯನ ಜೀವನ, ವ್ಯಕ್ತಿತ್ವ ನಿರ್ಮಾಣ : ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ



ಭದ್ರಾವತಿ ಸಿದ್ದಾರೂಢ ನಗರದ ನಿವಾಸಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯನವರ ನಿವಾಸದಲ್ಲಿ ೭೦ನೇ ವರ್ಷದ ಭೀಮರಥ ಶಾಂತಿ ಹಾಗು ಬಿ.ಆರ್ ಸುಮುಖ ಮತ್ತು ಎನ್.ಜಿ ಕುಂದನ್‌ರವರ ಲಿಂಗ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಇಷ್ಟಲಿಂಗ ಪೂಜಾ ಕಾರ್ಯಕ್ರಮದದಲ್ಲಿ ಸಿದ್ದಲಿಂಗಯ್ಯ-ನಾಗರತ್ನ ದಂಪತಿ ಸನ್ಮಾನಿಸಿ ವಿವಿಧ ಮಠಗಳ ಮಠಾಧೀಶರು ಆಶೀರ್ವದಿಸಿದರು. 
    ಭದ್ರಾವತಿ: ಮನುಷ್ಯನ ಜೀವನ ಮತ್ತು ವ್ಯಕ್ತಿತ್ವ ಆತನ ನಡೆ, ನುಡಿ, ಆಚಾರ-ವಿಚಾರ, ಕರ್ಮ ಕಾರ್ಯಗಳನ್ನು ಬಿಂಬಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕೆಂದು ಎಡೆಯೂರು ಬಾಳೆಹೊನ್ನೂರು ಶಾಖಾ ಮಠದ ಷ.ಬ್ರ. ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿಯವರು ಕರೆ ನೀಡಿದರು.
    ಶ್ರೀಗಳು ಸಿದ್ದಾರೂಢ ನಗರದ ನಿವಾಸಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯನವರ ನಿವಾಸದಲ್ಲಿ ಏರ್ಪಡಿಸಲಾಗಿದ್ದ ೭೦ನೇ ವರ್ಷದ ಭೀಮರಥ ಶಾಂತಿ ಹಾಗು ಬಿ.ಆರ್ ಸುಮುಖ ಮತ್ತು ಎನ್.ಜಿ ಕುಂದನ್‌ರವರ ಲಿಂಗ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಇಷ್ಟಲಿಂಗ ಪೂಜಾ ಕಾರ್ಯಕ್ರಮದದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
    ನಾವು ನಮ್ಮ ಜೀವನದಲ್ಲಿ ಧರ್ಮದ ಆಚರಣೆಗಳನ್ನು ಮಾಡಿದಾಗ ಶಾಂತಿ ನೆಮ್ಮದಿಯಿಂದ ಕೂಡಿದ ಧೀರ್ಘಾಯಿಷಿಗಳಾಗಿ ಬದುಕಬಹುದು. ಪ್ರಾಣಿಗಳು ಮನುಷ್ಯ ಸೇವಿಸದ ಆಹಾರ ಸೇವಿಸಿ ನಮಗೆ ಅಮೃತವನ್ನು ಕೊಡುತ್ತದೆ. ಆದರೆ ಮನುಷ್ಯ ಪ್ರಕೃತಿಯಿಂದ ದೊರೆಯುವ ಆಹಾರವನ್ನು ಸೇವಿಸಿ ವಿಷ ಕಾರುತ್ತಾನೆ. ಇದು ಇಂದಿನ ಜೀವನ ಕ್ರಮವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
    ಇಂದಿನ ಆಧುನಿಕ ಜೀವನ ಕ್ರಮದಲ್ಲಿ ನಾವು ನಮ್ಮ ಸನಾತನ ಧರ್ಮ ಅಚರಣೆ, ಸಂಪ್ರದಾಯ, ಆಚಾರ-ವಿಚಾರಗಳನ್ನು ಪಾಲಿಸಿ ಆಚರಿಸದೆ ಅವುಗಳನ್ನು ಕಡೆಗಣಿಸುತ್ತಿದ್ದೇವೆ. ಇದರ ಫಲ ಮುಂದೊಂದು ದಿನ ಅನುಭವಿಸಬೇಕಾಗುತ್ತದೆ. ಆ ಸಮಯದಲ್ಲಿ ಯಾಕೆ ಹೀಗೆ ಎಂಬುದಕ್ಕೆ ಉತ್ತರ ಸಿಗುವುದಿಲ್ಲ ಹಾಗು ಹೊಳೆಯುವುದಿಲ್ಲ. ಆದರಿಂದ ಹೊರ ಬರುವ ಮಾರ್ಗ ತಿಳಿಯುವುದಿಲ್ಲ. ಆಗ ನೋವಿನ ಜೀವನ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಇಂದು ಮಕ್ಕಳಿಗೆ ಲಿಂಗದೀಕ್ಷೆ ನೀಡುವ ಮೂಲಕ ಧಾರ್ಮಿಕ ಸಂಸ್ಕಾರ ನೀಡಿರುವುದು ಅತ್ಯಂತ ಸಂತೋಷದ ಹಾಗು ಮಾದರಿ ಸಂಗತಿಯಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯಿತ ಧರ್ಮದ ಪ್ರತಿಯೊಬ್ಬರೂ ಲಿಂಗ ದೀಕ್ಷೆಯನ್ನು ಪಡೆದು ಸಂಸ್ಕಾರವಂತರಾಗಿ ಉತ್ತಮ ಜೀವನ ನಡೆಸಬೇಕೆಂದು ಕರೆ ನೀಡಿದರು.
    ಬಿಳಿಕಿ ಹಿರೇಮಠದ ಷ.ಬ್ರ. ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಷ.ಬ್ರ.ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ, ವೃತ್ತಿಯಲ್ಲಿ ಚೈತನ್ಯ, ಕಾಯಕದಲ್ಲಿ ನಿಷ್ಠೆಯ ಬದುಕನ್ನು ಕಂಡು ಸಮಾಜದ ಎಲ್ಲರೂ ನಮ್ಮವರು ಎಂಬ ಅಭಿಮಾನ ಬೆಳೆಸಿಕೊಂಡ ವ್ಯಕ್ತಿ ಎತ್ತರಕ್ಕೆ ಬೆಳೆಯುತ್ತಾನೆ. ಅಂತಹ ವ್ಯಕ್ತಿತ್ವದ ಕಾರಣ ಸಿದ್ದಲಿಂಗಯ್ಯ ನಿಜವಾದ ಅರ್ಥದಲ್ಲಿ ಸಮಾಜ ಸೇವಕರಾಗಿದ್ದಾರೆ ಎಂದರು.
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ.ಸಂಗಮೇಶ್ವರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಿದವರಿಗೆ ಪ್ರಶಸ್ತಿ, ಸನ್ಮಾನ, ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಸಿದ್ದಲಿಂಗಯ್ಯನವರ ಸಾಮಾಜಿಕ ಕೆಲಸ ಕಾರ್ಯಗಳೇ ಸಾಕ್ಷಿ ಎಂದರು.
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಸದಸ್ಯರಾದ ಪಲ್ಲವಿ ದಿಲೀಪ್, ಆರ್. ಶ್ರೇಯಸ್(ಚಿಟ್ಟೆ), ವಾಗೀಶ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್ ವಿಜಯ ಕುಮಾರ್, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ನ್ಯಾಯವಾದಿ ಕೆ.ಎನ್ ಶ್ರೀಹರ್ಷ, ಶಂಕರಮಠದ ವ್ಯವಸ್ಥಾಪಕ ಕೆ.ಎಸ್ ನಾಗರಾಜ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಜೇಡಿಕಟ್ಟೆ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಉಪಾಧ್ಯಕ್ಷ ಆರ್. ಶಿವಣ್ಣ, ಕರುಮಾರಿಯಮ್ಮ ದೇವಸ್ಥಾನ ಅಧ್ಯಕ್ಷ ಪಿ. ರಾಮಲಿಂಗಂ, ಕೆಂಪೇಗೌಡ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪಿ. ಪ್ರಕಾಶ್, ದೇವಲಿಂಗೇಗೌಡ, ನ್ಯಾಯವಾದಿ ಎ.ಟಿ ರವಿ, ರುದ್ರಾರಾಧ್ಯ, ತ್ಯಾಗರಾಜ್ ಸೇರಿದಂತೆ ಇತರರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.
    ಸೌಮ್ಯ ಪ್ರಾರ್ಥಿಸಿ, ಪೂರ್ಣೀಮ ಸ್ವಾಗತಿಸಿದರು. ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಸಿದ್ದಲಿಂಗಯ್ಯ ಅನಿಸಿಕೆ ವ್ಯಕ್ತಪಡಿಸಿದರು. ಶಾಂತ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ ವಂದಿಸಿದರು.