ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ರದ್ದು : ೨೩ ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ

ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಚನ್ನಪ್ಪ ಆಗ್ರಹ 


ಚನ್ನಪ್ಪ 
    ಭದ್ರಾವತಿ: ಬಿಜೆ.ಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಹಲವು ಬಾರಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಹಿಂದೆ ಸಿಬಿಐ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದೆ. ಆದರೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಇದೀಗ ಪುನಃ ಸಿಬಿಐ ತನಿಖೆಗೆ ವಹಿಸಲಾಗಿದ್ದು, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ನಾಟಕವಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ ಆರೋಪಿಸಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಇದರ ಹೊಣೆಯನ್ನು ಕೇಂದ್ರ ಸರ್ಕಾರ ಹೊರುವ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಪಕ್ಷದ ಮೂಲಕ ಆಗ್ರಹಿಸಿದ್ದಾರೆ. 
    ವೈದ್ಯಕೀಯ ಶಿಕ್ಷಣ ಪ್ರವೇಶಾತಿಗೆ ಮೇ.೩, ೨೦೨೬ರಂದು ನಡೆದ ನೀಟ್ ಪರೀಕ್ಷೆಯನ್ನು ದೇಶದ ೨೩ ಲಕ್ಷ ವಿದ್ಯಾರ್ಥಿಗಳು ಎದುರಿಸಿದ್ದು, ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದೀಗ ಕೇಂದ್ರ ಸರ್ಕಾರ ನೀಟ್ ಪರೀಕ್ಷೆ ರದ್ದು ಪಡಿಸುವ ಮೂಲಕ ದೇಶದ ೨೩ ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆಯಲ್ಲಿ ಚಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ. 
    ವಿರ್ದ್ಯಾಥಿಗಳು ಹಗಲು-ರಾತ್ರಿ ನಿದ್ರೆಗೆಟ್ಟು ಪರೀಕ್ಷೆ ತಯಾರು ನಡೆಸಿದ್ದರು. ಈ ವಿದ್ಯಾರ್ಥಿಗಳಿಗೆ ಇದೀಗ ಕಣ್ಣೀರು ಬಿಟ್ಟರೆ ಬೇರೆ ದಾರಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
    ಈ ಹಿಂದೆ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗೆ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಸಿಇಟಿ ಮೂಲಕ ಸೀಟು ಹಂಚಿಕೆ ಮಾಡಿ ಅವರ ಕನಸು ಈಡೇರಿಸಲಾಗುತ್ತಿತ್ತು. ಆದರೆ ಈಗ ನೀಟ್ ಮಾಡಿ ಕೇಂದ್ರ ಸರ್ಕಾರ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ಈ ಹಿಂದೆ ಇದ್ದಂತೆಯೇ ವೈದ್ಯಕೀಯ ಶೀಟುಗಳು ಭರ್ತಿ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.  
    ಈ ಬಾರಿ ರಾಜಸ್ಥಾನದ ಬಿಜೆಪಿ ಯುವ ಮೋರ್ಚಾ ಮುಖಂಡನ ಮೂಲಕವೇ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಇದು ಶೋಚನೀಯ ಸಂಗತಿ, ಸೋರಿಕೆಯ ಹಿಂದೆ ಕೋಚಿಂಗ್ ಮಾಫಿಯಾ ಉದ್ದೇಶವನ್ನು ಕಳೆದುಕೊಂಡಿದೆ. ಇದೆಲ್ಲದರ ಸಂಪೂರ್ಣ ಹೊಣೆ ಹೊತ್ತಿರುವ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಚನ್ನಪ್ಪ ಆಗ್ರಹಿಸಿದ್ದಾರೆ.