ಸಮಾನ ಅವಕಾಶ, ನೆರವು ನೀಡಬೇಕೆಂಬ ಉದ್ದೇಶದಿಂದ ಹಲವು ಯೋಜನೆಗಳು ಜಾರಿಗೆ

ಯೋಜನೆಗಳ ಸದ್ಬಳಕೆಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಕರೆ 


ಶಿವಮೊಗ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್‌ರವರ ಕಚೇರಿ ಆವರಣದಲ್ಲಿ ೨೦೨೪-೨೫ನೇ ಸಾಲಿನ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಆಯ್ಕೆಯಾದ ಭದ್ರಾವತಿ ತಾಲೂಕಿನ ಮೂವರು ಸೇರಿದಂತೆ ೬ ಮಂದಿ ವಿಕಲಚೇತನ ಫಲಾನುಭವಿಗಳಿಗೆ ಸಹಾಯಕ ಸಾಧನಗಳನ್ನು ವಿತರಿಸಲಾಯಿತು
    ಭದ್ರಾವತಿ: ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ನೆರವು ದೊರಕಬೇಕೆಂಬ ಉದ್ದೇಶದಿಂದ ವಯೋವೃದ್ಧರು, ವಿಕಲಚೇನರು, ಅಶಕ್ತರಿಗಾಗಿ ಹಲವಾರು ಯೋಜನೆಗಳು ರೂಪುಗೊಂಡಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಕರೆ ನೀಡಿದರು.
    ಶಿವಮೊಗ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ತಮ್ಮ ಕಚೇರಿ ಆವರಣದಲ್ಲಿ ೨೦೨೪-೨೫ನೇ ಸಾಲಿನ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಆಯ್ಕೆಯಾದ ತಾಲೂಕಿನ ಮೂವರು ಸೇರಿದಂತೆ ೬ ಮಂದಿ ವಿಕಲಚೇತನ ಫಲಾನುಭವಿಗಳಿಗೆ ಸಹಾಯಕ ಸಾಧನಗಳನ್ನು ವಿತರಿಸಿ ಮಾತನಾಡಿದರು. 
    ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದ ನಿವಾಸಿಗಳಾದ ದರ್ಶನ್ ಮತ್ತು ಶರವಣ ಹಾಗು ಮಲ್ಲಾಪುರ ನಿವಾಸಿ ಲಕ್ಷ್ಮೀ ಮತ್ತು ಶಿವಮೊಗ್ಗ ನಿವಾಸಿ ಮುನಿಯಪ್ಪ ಒಟ್ಟು ೪ ವಿಕಲಚೇತನರಿಗೆ ತ್ರಿಚಕ್ರ ವಾಹನ ಹಾಗು ಇಬ್ಬರಿಗೆ ಶ್ರವಣ ಯಂತ್ರಗಳನ್ನು ವಿತರಿಸಿದರು. 
    ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸುವರ್ಣ ನಾಯ್ಕ್, ಕಾಚಗೊಂಡನ ಹಳ್ಳಿ ಗ್ರಾಮದ ನಿವಾಸಿ, ಬಿಜೆಪಿ ಮುಖಂಡ ಮಂಜುನಾಥ್ ಹಾಗು ರೂಪೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.