ಎಂಪಿಎಂ ಅರಣ್ಯ ವ್ಯಾಪ್ತಿಯ ಸಹಾಯಕ ಅರಣ್ಯಾಧಿಕಾರಿ ಅಕ್ರಮದ ವಿರುದ್ಧ ತನಿಖೆ ನಡೆಸಿ

ಮುಖ್ಯಮಂತ್ರಿಗಳಿಗೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮನವಿ 


ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ತಾಂತ್ರಿಕ ಸಹಾಯಕ ಮತ್ತು ಸಹಾಯಕ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಬಿ ಪಾಲಾಕ್ಷಿರವರ ಅಕ್ರಮಗಳ ಬಗ್ಗೆ ಉನ್ನತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಹಾಗು ಸೇವೆಯಿಂದ ತಕ್ಷಣ ಬಿಡುಗಡೆಗೊಳಿಸುವಂತೆ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 
    ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ತಾಂತ್ರಿಕ ಸಹಾಯಕ ಮತ್ತು ಸಹಾಯಕ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಬಿ ಪಾಲಾಕ್ಷಿರವರ ಅಕ್ರಮಗಳ ಬಗ್ಗೆ ಉನ್ನತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಹಾಗು ಸೇವೆಯಿಂದ ತಕ್ಷಣ ಬಿಡುಗಡೆಗೊಳಿಸುವಂತೆ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 
ಎನ್.ಬಿ ಪಾಲಾಕ್ಷಿರವರು ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಹೊಂದಿದ್ದು, ನಿವೃತ್ತಿಯ ನಂತರದಲ್ಲಿ ಸರ್ಕಾರದ ಆದೇಶದ ಮೇರೆಗೆ ನಗರದ ಎಂಪಿಎಂ ಅರಣ್ಯ ವ್ಯಾಪ್ತಿಯಲ್ಲಿ ತಾಂತ್ರಿಕ ಸಹಾಯಕ ಮತ್ತು ಸಹಾಯಕ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 
    ಪಾಲಾಕ್ಷಿರವರು ಕಾರ್ಯ ನಿರ್ವಹಿಸುತ್ತಿರುವ ವ್ಯಾಪ್ತಿಯಲ್ಲಿ ಸುಮಾರು ೩೫ ಜನ ವಾಚರ್‌ಗಳು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರದಿಂದ ಪ್ರತಿ ತಿಂಗಳು ವಾಚರ್‌ಗಳಿಗೆ ೧೨,೦೦೦ ರು. ವೇತನ ನಿಗದಿಯಾಗಿದ್ದು, ಆದರೆ ಪ್ರತಿ ವಾಚರ್‌ಗಳಿಗೆ ೮.೫೦೦ ರು. ವೇತನ ನಗದು ರೂಪದಲ್ಲಿ ಪಾವತಿ ಮಾಡುತ್ತಿದ್ದಾರೆ. ಹಣ ಸಂದಾಯ ಮಾಡಿರುವ ಬಗ್ಗೆ ಯಾವುದೇ ದಾಖಲೆಗಳಾಗಲೀ, ರಶೀದಿಗಳನ್ನಾಗಲಿ ನೀಡಿರುವುದಿಲ್ಲ. ಅಲ್ಲದೆ ದಾಖಲೆಗಳನ್ನು ಸಹ ಇಟ್ಟುಕೊಂಡಿರುವುದಿಲ್ಲ ಆರೋಪಿಸಿದ್ದಾರೆ. 
ಪಾಲಾಕ್ಷಿಯವರ ಕಾರ್ಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಸಿದ್ಧಾಪುರ ಸರ್ವೆ ನಂ : ೧೩೫/೧೩೬, ಸಿರಿಯೂರು ೧೨/೬೭, ಕಲ್ಲಹಳ್ಳಿ ೪೧/೪೨, ಆಗಲಮನೆ ಗ್ರಾಮದ ಸರ್ವೆ ನಂ : ೧೬/೩೬/೩೫, ರಾಮನಕೊಪ್ಪ ೧೩/೧೪/೧೫, ನಂಜಾಪುರ ೨೭/೨೫ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀಲಗಿರಿ ಮರಗಳಿರುವ ಪ್ಲಾಂಟೇಷನ್ ಜಾಗದಲ್ಲಿ ನೀಲಗಿರಿ ಮರಗಳ ಸುತ್ತ ಇರುವ ಕಳೆ ಮತ್ತು ಗಿಡಗಂಟೆಗಳನ್ನು ವೀಡಿಂಗ್ (ಕಳೆ ಕೀಳುವುದು) ಮತ್ತು ಪ್ಲಾಗಿಂಗ್ ಮಾಡಲು ಸರ್ಕಾರದಿಂದ ಇಂತಿಷ್ಟು ಹಣ ನಿಗದಿ ಪಡಿಸಿದ್ದು, ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಸ್ಥಳೀಯ ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದ್ದು, ಈ ವಿಚಾರ ನೈಜವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 
    ಪಾಲಾಕ್ಷಿರವರು ಸರ್ಕಾರಿ ನೌಕರಿಯಿಂದ ನಿವೃತ್ತಿಗೊಂಡು ಎಂಪಿಎಂ ಅರಣ್ಯ ಭಾಗದಲ್ಲಿ ತಾಂತ್ರಿಕ ಸಹಾಯಕ ಮತ್ತು ಸಹಾಯಕ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ಮುಖ್ಯಮಂತ್ರಿಗಳ ಆದೇಶದ ನಂತರ ಸರ್ಕಾರಿ ನೌಕರಿಯಿಂದ ನಿವೃತ್ತಿಪಡೆದ ಅಧಿಕಾರಿಗಳು ಸರ್ಕಾರದ ಅಧೀನಕ್ಕೆ ಒಳಪಡುವ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಅಂತಹ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಆದೇಶ ಮಾಡಿರುತ್ತಾರೆ. ಈ ಹಿನ್ನಲೆಯಲ್ಲಿ ತಕ್ಷಣ ಪಾಲಾಕ್ಷಿರವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಇವರ ಅಕ್ರಮಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. 
    ಉಪ ತಹಸೀಲ್ದಾರ್‌ಗಳಾದ ನಾರಾಯಣಗೌಡ ಹಾಗು ರಾಜ್ ಅರಸುರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಂಕ್ಲೀಪುರ ರಘು ಉಪಸ್ಥಿತರಿದ್ದರು.