ಆಸ್ಪತ್ರೆ ಮುಂಭಾಗ ತ್ಯಾಜ್ಯ ಎಸೆಯದಂತೆ ರಂಗೋಲಿ ಬಿಡಿಸಿ ಜಾಗೃತಿ 


ಆಸ್ಪತ್ರೆ ಮುಂಭಾಗದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯ ದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಲು ಭದ್ರಾವತಿ ನಗರಸಭೆ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ತಮ್ಮದೇ ಆದ ವಿಶಿಷ್ಟ ರೀತಿಯ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾರೆ.
    ಭದ್ರಾವತಿ : ಆಸ್ಪತ್ರೆ ಮುಂಭಾಗದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಲು ನಗರಸಭೆ ಸಿಬ್ಬಂದಿಗಳು ಹಾಗೂ ಸಮುದಾಯ ಸಂಚಾಲಕರು ತಮ್ಮದೇ ಆದ ವಿಶಿಷ್ಟ ರೀತಿಯ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾರೆ.
    ನಗರಸಭೆ ವಾರ್ಡ್ ನಂಬರ್ ೨೨ರ ಉಜ್ಜನಿಪುರ ಮುಖ್ಯ ರಸ್ತೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಹಲವು ಬಾರಿ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಿಗೆ ನಗರಸಭೆ ವತಿಯಿಂದ ಸೂಚಿಸಿದ್ದರೂ ಸಹ ತ್ಯಾಜ್ಯ ಎಸೆಯುವುದು ಮುಂದುವರೆದಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆ ಸಮುದಾಯ ಸಂಚಾಲಕರು ಹಾಗೂ ಪೌರಕಾರ್ಮಿಕರು ತ್ಯಾಜ್ಯ ಎಸೆಯುವ ಸ್ಥಳವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸುವ ಮೂಲಕ ಸಾರ್ವಜನಿಕರಲ್ಲಿ ತ್ಯಾಜ್ಯ ಎಸೆಯಂತೆ ಅರಿವು ಮೂಡಿಸಿ ಸ್ವಚ್ಛತೆ ಕಾಪಾಡಿಕೊಳ್ಳಲು ಮನವಿ ಮಾಡಿದರು. 
    ಒಂದು ವೇಳೆ ಮುಂದಿನ ದಿನಗಳಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬಂದಲ್ಲಿ ನಗರಸಭೆ ವತಿಯಿಂದ ೫,೦೦೦ ರು. ದಂಡ ವಿಧಿಸುವುದಾಗಿ ಎಚ್ಚರಿಸಿದರು. ಅಲ್ಲದೆ ತ್ಯಾಜ್ಯ ಎಸೆಯದಂತೆ ಫಲಕ ಸಹ ಅಳವಡಿಸಿದರು. 
       ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಎಂ. ಪಲ್ಲವಿ ಹಾಗೂ ನಗರಸಭೆ ಸೂಪರ್‌ವೈಸರ್ ಎನ್. ಗೋವಿಂದ, ಸಮುದಾಯ ಸಂಚಾಲಕರುಗಳು ಹಾಗೂ ಪೌರಕಾರ್ಮಿಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.