ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಬಿ.ಕೆ ಸಂಗಮೇಶ್ವರ್
ಭದ್ರಾವತಿ ಬಾರಂದೂರು ಗ್ರಾಮದ ಬಯಲು ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಭಾನುವಾರ ಗುರುತಿನ ಚೀಟಿ ವಿತರಣೆ, ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ಉನ್ನತ ಹುದ್ದೆಯಲ್ಲಿರುವವರಿಗೆ ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ: ಶ್ರಮ ಜೀವಿಗಳಾದ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಭಾನುವಾರ ಬಾರಂದೂರು ಗ್ರಾಮದ ಬಯಲು ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಆಯೋಜಿಸಲಾಗಿದ್ದ ಗುರುತಿನ ಚೀಟಿ ವಿತರಣೆ, ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ಉನ್ನತ ಹುದ್ದೆಯಲ್ಲಿರುವವರಿಗೆ ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರ ಯಾವುದೇ ರೀತಿಯ ಸಮಸ್ಯೆಗಳಿರಲಿ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತೇನೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಕ್ಷೇತ್ರದಲ್ಲಿ ಕಾರ್ಮಿಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿದ್ದು, ಬೇಡಿಕೆಗಳನ್ನು ಈಡೇರಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಇನ್ನೂ ಹೆಚ್ಚಿನ ಸಹಕಾರ ನೀಡಲು ಬದ್ದ ಎಂದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಮಾತನಾಡಿ, ಕ್ಷೇತ್ರದಲ್ಲಿ ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕಾರ್ಮಿಕರ ಬಹುತೇಕ ಬೇಡಿಕೆಗಳನ್ನು ಈಡೇರಿಸಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ಇದೆ ರೀತಿಯ ಸಹಕಾರ ನೀಡಲಿದ್ದಾರೆ ಎಂದರು.
ಒಕ್ಕೂಟದ ತಾಲೂಕು ಅಧ್ಯಕ್ಷ ಪರಮೇಶ್(ತ್ಯಾಗು) ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುಂದರ್ ಬಾಬು, ತಾಲೂಕು ಉಪಾಧ್ಯಕ್ಷ ರೋಹಿಣಿ ಕುಮಾರ್, ಕಾರ್ಯದರ್ಶಿ ಎಂ. ಮಧುಸೂದನ್, ಸಹಕಾರ್ಯದರ್ಶಿ ಪಿ. ಶರವಣನ್, ಖಜಾಂಚಿ ಕುಮಾರ್ ಮೇಸ್ತ್ರಿ ಡೈರಿ, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಮೇಸ್ತ್ರಿ, ಸಂಚಾಲಕ ಷಣ್ಮುಖಂ ಮೇಸ್ತ್ರಿ, ಮಹಿಳಾ ಘಟಕದ ಹೇಮಾವತಿ, ಜಯಂತಿ ಮತ್ತು ಅಂತೋಣಿ ಮೇರಿ ಹಾಗು ಅಸಂಘಟಿತ ಕಾರ್ಮಿಕರ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯ್ ಕಾರ್ಯಕ್ರಮ ನಿರೂಪಿಸಿದರು.
