ತಹಸೀಲ್ದಾರ್ ಕೆ. ಪರುಸಪ್ಪ ವರ್ಗಾವಣೆ : ಸ್ಥಳ, ಹುದ್ದೆ ಸೂಚಿಸದ ಸರ್ಕಾರ
ತಹಸೀಲ್ದಾರ್ ಕೆ. ಪರುಸಪ್ಪ
ಭದ್ರಾವತಿ : ಒಂದೆಡೆ ರಾಜ್ಯದ ಮುಖ್ಯಮಂತ್ರಿ ಬದಲಾಗುತ್ತಿದ್ದರೆ, ಮತ್ತೊಂದೆಡೆ ರಾತ್ರೋರಾತ್ರಿ ತಹಸೀಲ್ದಾರ್ ಬದಲಾವಣೆಯಾಗಿದ್ದಾರೆ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಕೆ. ಪರುಸಪ್ಪರನ್ನು ಸರ್ಕಾರ ಬೇರೆಡೆಗೆ ವರ್ಗಾವಣೆಗೊಳಿಸಿದೆ. ಆದರೆ ಯಾವುದೇ ಹುದ್ದೆ, ಸ್ಥಳ ಸೂಚಿಸಿಲ್ಲ.
ಕುರುಬ ಸಮಾಜಕ್ಕೆ ಸೇರಿರುವ ತಹಸೀಲ್ದಾರ್ ಪರುಸಪ್ಪ ಕುರುಬರ ಅವರು ತಾಲೂಕಿನಲ್ಲಿ ಸುಮಾರು ೧೬ ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಏಕಾಏಕಿ ಇವರನ್ನು ವರ್ಗಾವಣೆಗೊಳಿಸಲಾಗಿದೆ. ಸರ್ಕಾರದ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಯಾವುದೇ ವಿವಾದಗಳಿಗೆ ಎಡೆಮಾಡಿಕೊಡದೆ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ವರ್ಗಾವಣೆಗೊಳಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರದೀಪ್ ದೇವಗಿರಿ ನೂತನ ತಹಸೀಲ್ದಾರ್ :
ಕೆ. ಪರುಸಪ್ಪ ಅವರ ಹುದ್ದೆಗೆ ವಿಜಯಪುರ ತಾಳಿಕೋಟೆ ತಹಸೀಲ್ದಾರ್ ಗ್ರೇಡ್-೨ ಪ್ರದೀಪ್ ದೇವಗಿರಿ ಅವರನ್ನು ವರ್ಗಾವಣೆಗೊಳಿಸಿ ಮೇ.೨೭ರಂದು ಸರ್ಕಾರ ಆದೇಶಿಸಿದೆ. ಗುರುವಾರ ಬಕ್ರೀದ್ ಹಿನ್ನಲೆಯಲ್ಲಿ ಸಾರ್ವಜನಿಕ ರಜೆ ಇರುವ ಕಾರಣ ನೂತನ ತಹಸೀಲ್ದಾರ್ ಪ್ರದೀಪ್ ದೇವಗಿರಿಯವರು ಶುಕ್ರವಾರ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
