ಹಾಲಪ್ಪ ವೃತ್ತದಲ್ಲಿ ವಿಭಜಕ ನಿರ್ಮಾಣಕ್ಕೆ ಜೆಡಿಎಸ್ ವಿರೋಧ : ಕಾಮಗಾರಿ ಅರ್ಧಕ್ಕೆ ಸ್ಥಗಿತ 

ನಗರಸಭೆ ಸಭಾಂಗಣದಲ್ಲಿ ಮೇ.೨೧ರ ಗುರುವಾರ ಸಭೆ ನಡೆಸಿ ಮುಂದಿನ ತೀರ್ಮಾನ 

ಭದ್ರಾವತಿ: ಕರ್ನಾಟಕ ರತ್ನ, ವರನಟ ಡಾ. ರಾಜಕುಮಾರ್ ರಸ್ತೆ(ಬಿ.ಎಚ್ ರಸ್ತೆ), ಹಾಲಪ್ಪ ವೃತ್ತದಲ್ಲಿ ನಗರಸಭೆಯಿಂದ ರಸ್ತೆ ಮಧ್ಯ ಭಾಗದಲ್ಲಿ ವಿಭಜಕ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಜಾತ್ಯಾತೀತ ಜನತಾದಳ ಮುಖಂಡರು ಬುಧವಾರ ಕಾಮಗಾರಿ ಸ್ಥಳದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಮೇ.೨೧ರ ಗುರುವಾರ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಲಿದೆ. 
    ಹಾಲಪ್ಪ ವೃತ್ತದಲ್ಲಿ ರಸ್ತೆ ಕಿರಿದಾಗಿದ್ದು, ಈಗಾಗಲೇ ಅಪಘಾತಗಳು ಸಂಭವಿಸುತ್ತಿವೆ. ಇಂತಹ ಸ್ಥಳದಲ್ಲಿ ರಸ್ತೆ ವಿಭಜಕ ನಿರ್ಮಿಸುವುದರಿಂದ ಮತ್ತಷ್ಟು ಅಪಘಾತಗಳು ಹೆಚ್ಚಾಗಲಿವೆ. ರಸ್ತೆ ವಿಭಜಕ ಅವೈಜ್ಞಾನಿಕವಾಗಿದ್ದು, ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. 
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ನೇತೃತ್ವದಲ್ಲಿ ಸುಮಾರು ೧ ಗಂಟೆಗೂ ಹೆಚ್ಚು ಸಮಯ ನಗರಸಭೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಯಿತು. ಅಂತಿಮವಾಗಿ ಈ ಸಂಬಂಧ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿ, ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದರು. 
    ಜೆಡಿಎಸ್ ಪಕ್ಷದ ಪ್ರಮುಖರಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ನಗರಸಭೆ ಸದಸ್ಯರಾದ ಉದಯ್ ಕುಮಾರ್, ಆರ್. ಮೋಹನ್ ಕುಮಾರ್, ಎಸ್. ಮಧುಸೂದನ್,  ಧರ್ಮರಾಜ್, ಎನ್. ರಾಮಕೃಷ್ಣ, ಸಾವಿತ್ರಮ್ಮ ಪುಟ್ಟೇಗೌಡ, ಭಾಗ್ಯಮ್ಮ ಮಂಜುನಾಥ್ ಹಾಗು ಸ್ಥಳೀಯ ವರ್ತಕರು ಉಪಸ್ಥಿತರಿದ್ದರು.