ಮುಖ್ಯಮಂತ್ರಿ ಬದಲಾವಣೆಯಿಂದ ಉಕ್ಕಿನ ನಗರ ಚಿತ್ರಣ ಬದಲಾಗುವುದೇ?
ಭದ್ರಾವತಿ ಮೈಸೂರು ಕಾರ್ಖಾನೆ
ಮುಖ್ಯಾಂಶಗಳು :
- ಎಂಪಿಎಂ ಕಾರ್ಖಾನೆ ಸೇರಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ.
- ಕ್ಷೇತ್ರದ ಜನತೆಗೆ ಭರವಸೆ, ತರಳುಬಾಳು ಶ್ರೀಗಳ ಮುಂದೆ ವಾಗ್ದಾನ.
- ಸಂಗಮೇಶ್ವರ್ ಮೊದಲ ಮಂತ್ರಿಯಾಗುವರೇ?
ಭದ್ರಾವತಿ : ರಾಜ್ಯ ರಾಜಕಾರಣದಲ್ಲಿನ ಬದಲಾವಣೆಯಿಂದ ಕ್ಷೇತ್ರಕ್ಕೆ ಲಾಭವಾಗುವುದೇ ಎಂಬ ನಿರೀಕ್ಷೆ ಇಲ್ಲಿನ ನಿವಾಸಿಗಳು ಎದುರು ನೋಡುತ್ತಿದ್ದು, ಒಂದೆಡೆ ಕೇಂದ್ರ ಉಕ್ಕು ಪ್ರಾಧಿಕಾರದ ಶತಮಾನ ಪೂರೈಸಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅವನತಿ ದಾರಿ ಹಿಡಿದಿದೆ. ಮತ್ತೊಂದೆಡೆ ಕಳೆದ ಒಂದು ದಶಕದಿಂದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಮುಚ್ಚಲ್ಪಟ್ಟಿದೆ. ಈ ನಡುವೆ ಕ್ಷೇತ್ರದ ಆರ್ಥಿಕತೆ ಸಂಪೂರ್ಣವಾಗಿ ಕುಸಿದು ಬಿದ್ದು, ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಆರಂಭವಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕ್ಷೇತ್ರಕ್ಕೆ ವರದಾನವಾಗುವುದೇ ?
ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದ್ದ ಕ್ಷೇತ್ರದ ಜನತೆಗೆ ಇದೀಗ ಅವರ ರಾಜೀನಾಮೆಯಿಂದ ನಿರಾಸೆ ಉಂಟಾಗಿದೆ. ಈ ನಡುವೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು, ಹಲವು ಬಾರಿ ಸಭೆ-ಸಮಾರಂಭಗಳಲ್ಲಿ ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸುವುದಾಗಿ, ಅಲ್ಲದೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಭರವಸೆ ನೀಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಬಿ.ಕೆ ಸಂಗಮೇಶ್ವರ್ ಅವರನ್ನು ಗೆಲ್ಲಿಸಿಕೊಟ್ಟಲ್ಲಿ ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸುವುದು ಖಚಿತ ಎಂದು ಭರವಸೆ ನೀಡಿದ್ದರು. ಇದು ಒಂದೆಡೆ ಮತದಾರರಿಗೆ ನೀಡಿದ ಭರವಸೆಯಾಗಿರದೆ ತರಳುಬಾಳು ಜಗದ್ಗುರುಗಳಿಗೆ ನೀಡಿದ ವಾಗ್ದಾನ ಸಹ ಆಗಿದೆ. ಜನವರಿ ತಿಂಗಳಿನಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಡಿ.ಕೆ ಶಿವಕುಮಾರ್‌ರವರು ಕೇವಲ ಎಂಪಿಎಂ ಕಾರ್ಖಾನೆ ಮಾತ್ರವಲ್ಲ ಇಡೀ ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವುದಾಗಿ ಶ್ರೀಗಳ ಸಮ್ಮುಖದಲ್ಲಿ ತಿಳಿಸಿದ್ದರು.
ಇದೀಗ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿರುವ ಡಿ.ಕೆ ಶಿವಕುಮಾರ್ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್
ಮೊದಲ ಮಂತ್ರಿಯಾಗುವರೇ ಸಂಗಮೇಶ್ವರ್ :
ತನ್ನದೇ ಆದ ಪರಂಪರೆ ಹೊಂದಿರುವ, ಒಂದು ಕಾಲದಲ್ಲಿ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದ್ದ ಕ್ಷೇತ್ರದಲ್ಲಿ ಇದುವರೆಗೂ ಮಂತ್ರಿಯಾದವರೂ ಯಾರು ಇಲ್ಲ. ಪ್ರಸ್ತುತ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ್ ೪ ಬಾರಿ ಆಯ್ಕೆಯಾಗಿದ್ದು, ದಿವಂಗತ ಎಂ.ಜೆ ಅಪ್ಪಾಜಿಯವರು ೩ ಬಾರಿ ಶಾಸಕರಾಗಿದ್ದಾರೆ. ಆದರೆ ಇಬ್ಬರಿಗೂ ಮಂತ್ರಿ ಪದವಿ ಲಭಿಸಿಲ್ಲ.
ಮಂತ್ರಿ ಸ್ಥಾನಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುವ ಸಂಗಮೇಶ್ವರ್ ಅವರಿಗೆ ೨ ಬಾರಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಾರಿಯಾದರೂ ಅವರಿಗೆ ಮಂತ್ರಿ ಸ್ಥಾನ ಸಿಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ ಸಂಗಮೇಶ್ವರ್‌ರವರು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಪುತ್ರ ಗಣೇಶ್ ಅವರಿಗೆ ತಮ್ಮ ಸ್ಥಾನ ಬಿಟ್ಟುಕೊಡುವುದಾಗಿ ಘೋಷಿಸಿತ್ತು. ಕಳೆದ ಸುಮಾರು ೧ ವರ್ಷದಿಂದ ಪುತ್ರನ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಬದಲಾವಣೆಯಿಂದ ಮಂತ್ರಿ ಸ್ಥಾನ ಲಭಿಸುವ ಜೊತೆಗೆ ಕ್ಷೇತ್ರದ ಚಿತ್ರಣ ಬದಲಾಗುವುದೇ ಎಂಬ ಆಶಾ ಭಾವನೆ ಇಲ್ಲಿನ ನಿವಾಸಿಗಳದ್ದಾಗಿದೆ.

.jpg)