ಕಾರ್ಮಿಕರು ಕಾನೂನು ಉಲ್ಲಂಘನೆಗಳ ಪ್ರಶ್ನಿಸುವುದನ್ನು ಕಲಿಯಿರಿ



ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಜೆ.ಎಂ.ಎಫ್.ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ರವಿಕುಮಾರ್ ಉದ್ಘಾಟಿಸಿಮಾತನಾಡಿದರು.
    ಭದ್ರಾವತಿ : ಸಮಾಜದಲ್ಲಿ ಕಾರ್ಮಿಕರು ತಮ್ಮ ಜವಾಬ್ದಾರಿಯನ್ನು ಅರಿತು ಯಾವುದೇ ಇಲಾಖೆಯ ಉಲ್ಲಂಘನೆಗಳನ್ನು ಪ್ರಶ್ನೆ ಮಾಡುವುದನ್ನು ಕಲಿಯಬೇಕು. ತಮ್ಮ ವೇತನದ ಬಗ್ಗೆ, ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಬೇಕೆಂದು ನಗರದ ಜೆ.ಎಂ.ಎಫ್.ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ರವಿಕುಮಾರ್ ಹೇಳಿದರು.
    ಅವರು ತಾಲೂಕಿನ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಅಸಂಘಟಿತ ಕಾರ್ಮಿಕರಿಗೆ ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾರ್ಮಿಕರು ಮಾಲೀಕರ ಬಳಿ ಅನಗತ್ಯವಾಗಿ ಮುಂಗಡವಾಗಿ ಹಣ ತೆಗೆದುಕೊಂಡು, ತಮ್ಮ ಹಕ್ಕುಗಳನ್ನು ಒತ್ತೆ ಇಟ್ಟು ಕೆಲಸ ನಿರ್ವಹಿಸಿದರೆ ಅದು ಜೀತ ಕಾರ್ಮಿಕ ಪದ್ಧತಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂಬ ಕಾನೂನು ರೂಪಿಸಲಾಗಿದೆ. ಹೀಗೆ ಹಲವಾರು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
    ಕಾರ್ಮಿಕ ನಿರೀಕ್ಷಕ ಬಿ.ಎಂ ರಕ್ಷಿತ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಯಾವುದೇ ಕಾನೂನು ಅರಿವು ಕಾರ್ಯಕ್ರಮಗಳು ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು ಎಂಬ ನ್ಯಾಯಾಧೀಶರ ಆಶಯದಂತೆ ಪ್ರಸ್ತುತ ಹೊಳೆಹೊನ್ನೂರಿನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು ಎಂದರು.
    ಕಾರ್ಯಕ್ರಮದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತವಾಗಿ ಹೊಸ ಲೇಬರ್ ಕಾರ್ಡ್ ಮತ್ತು ಲೇಬರ್ ಕಾರ್ಡ್ ರಿನಿವಲ್ ಮಾಡಿಕೊಡಿಲಾಯಿತು.
ಕಾರ್ಮಿಕ ನಿರೀಕ್ಷಕಿ ಜೆ.ವಿ ಸುಪ್ರಿತ ಕಾರ್ಮಿಕ ಇಲಾಖೆಯ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನ್ಯಾಯವಾದಿ ಎನ್. ರಂಗಪ್ಪ ಮಾತನಾಡಿ, ಕಾರ್ಮಿಕರಿಗೆ ಅನ್ವಯಿಸುವ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.
    ಹೊಳೆಹೊನ್ನೂರು ಪೊಲೀಸ್ ಠಾಣಾ ನಿರೀಕ್ಷಕಿ ಶಾಂತಲಾ ಅಧ್ಯಕ್ಷತೆವಹಿಸಿದ್ದರು. ನ್ಯಾಯವಾದಿ ವಿಠ್ಠಲ್ ರಾವ್ ಘೋರ್ಪಡೆ ಹೊಳೆಹೊನ್ನೂರು ಭಾಗದ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.