ಪರವಾನಗಿ ಭೂಮಾಪಕರು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ

ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ 


    ಭದ್ರಾವತಿ:  ಒಂದು ಬಾರಿ ವಿಶೇಷ ನೇಮಕಾತಿ ಉಪಕ್ರಮದಲ್ಲಿ ಸಕ್ರಮಗೊಳಿಸುವ ಸಂಬಂಧ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರದಲ್ಲಿ ಭಾಗವಹಿಸಿರುವ ಪರವಾನಗಿ ಭೂಮಾಪಕರುಗಳು ತಕ್ಷಣ ಕರ್ತವ್ಯಕ್ಕೆ ಹಾಜರುವಂತೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಸೂಚಿಸಿದ್ದಾರೆ. 
    ಪರವಾನಗಿ ಭೂಮಾಪಕರು ಕಳೆದ ಕೆಲವು ತಿಂಗಳಿನಿಂದ ಮುಷ್ಕರದಲ್ಲಿ ತೊಡಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗದಿರುವುದನ್ನು ಖಂಡಿಸಿ ಹಾಗು ಭೂ ದಾಖಲೆಗಳ ಸಂಬಂಧ ಉಂಟಾಗಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಒಂದೆಡೆ ಹೋರಾಟ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಒಂದೆಡೆ ಹೋರಾಟಕ್ಕೆ ಸ್ಪಂದನೆ ವ್ಯಕ್ತವಾಗಿದೆ. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ, ಬೆಂಗಳೂರು, ಆಯುಕ್ತರು ಈ ಸಂಬಂಧ ಮೇ.೧೧ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. 
  ಕರ್ತವ್ಯಕ್ಕೆ ಹಾಜರಾಗದೇ ಅಳತೆ ಕೆಲಸ ನಿರ್ವಹಿಸದೇ ಪರವಾನಗಿ ಭೂ. ಮಾಪಕರು ಸರ್ಕಾರದ ವಿರುದ್ಧ ಫೆ.೨೭ರಿಂದ ಈವರೆಗೂ ಮುಷ್ಕರ ಕೈಗೊಂಡಿರುವುದರಿಂದ ರೈತರಿಗೆ ಹಾಗೂ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗಿದೆ.  ಇದು ಭೂಮಾಪಕರ ಸರ್ಕಾರಿ ಕೆಲಸದ ನಿರ್ಲಕ್ಷ್ಯ ಹಾಗೂ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿಸುತ್ತದೆ. ಭೂಮಾಪಕರ ಬೇಡಿಕೆಗಳು ಸರ್ಕಾರದ ಹಂತದಲ್ಲಿ ಇರುವುದರಿಂದ ಸರ್ಕಾರವೇ ಪರಿಹರಿಸಬೇಕಾಗಿರುತ್ತದೆ. ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಸೇವೆಗಳನ್ನು ಸಕಾಲದಲ್ಲಿ ಒದಗಿಸಲು ವಿಳಂಬವಾಗುತ್ತಿದ್ದು, ಅಲ್ಲದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿರುತ್ತದೆ. ಈ ಹಿನ್ನಲೆಯಲ್ಲಿ ತಕ್ಷಣದಿಂದಲೇ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಬೇಕೆಂದು. ತಪ್ಪಿದಲ್ಲಿ ಪರವಾನಗಿಯನ್ನು ಅಮಾನತ್ತಿನಲ್ಲಿರಿಸಿ, ಕರ್ನಾಟಕ ಭೂಕಂದಾಯ ಕಾಯ್ದೆ ನಿಯಮ ೧೯೬೪ ಮತ್ತು ೧೯೬೬ (ತಿದ್ದುಪಡಿ-೨೦೧೩) ರ ನಿಯಮ ೪೬ (ಕೆ-೨)ರಂತೆ ಪರವಾನಗಿ ರದ್ದುಪಡಿಸಲು ಶಿಫಾರಸ್ಸು ಮಾಡುವಂತೆ ಆಯುಕ್ತರು ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ನೀಡಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಸೂಚಿಸಿದ್ದಾರೆ.