ವಿಐಎಸ್‌ಎಲ್ ಕಾರ್ಖಾನೆಗೆ ಉಕ್ಕು ಪ್ರಾಧಿಕಾರದ ಮುಖ್ಯ ವ್ಯವಸ್ಥಾಪಕ ನಿರ್ದೇಶಕರ ಭೇಟಿ
ಖುದ್ದು ಪರಿಶೀಲನೆ, ಆಡಳಿತ ಮಂಡಳಿ, ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ
ಡಾ. ಅಶೋಕ್ ಕುಮಾರ್ ಪಾಂಡ
ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಗುರುವಾರ ಸಂಜೆ ಪ್ರಾಧಿಕಾರದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ(ಸಿಎಂಡಿ) ಡಾ. ಅಶೋಕ್ ಕುಮಾರ್ ಪಾಂಡ ಭೇಟಿ ನೀಡಿ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಹಾಗು ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕಳೆದ ಸುಮಾರು ೨ ವರ್ಷಗಳಿಂದ ಕಾರ್ಖಾನೆ ಪುನಶ್ಚೇತನಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಈ ನಡುವೆ ಕಾರ್ಖಾನೆಗೆ ೨-೩ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುನಶ್ಚೇತನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದರೂ ಸಹ ಹಲವು ಅಡೆತಡೆಗಳು ಎದುರಾಗುತ್ತಿದ್ದು, ಆದರೂ ಸಹ ಪ್ರಯತ್ನ ಮುಂದುವರೆಸಿದ್ದಾರೆ. ಇದರ ಭಾಗವಾಗಿ ಉಕ್ಕು ಪ್ರಾಧಿಕಾರದ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಖುದ್ದಾಗಿ ಕಾರ್ಖಾನೆಗೆ ಭೇಟಿ ನೀಡಿ ಅಧಿಕಾರಿಗಳು ಹಾಗು ಕಾರ್ಮಿಕ ಸಂಘಟನೆಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಡಾ. ಅಶೋಕ್ ಕುಮಾರ್ ಪಾಂಡರವರು ಬೆಳಿಗ್ಗೆ ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ನಂತರ ರಸ್ತೆ ಮಾರ್ಗವಾಗಿ ಸಂಜೆ ೬ ಗಂಟೆಗೆ ವಿಐಎಸ್‌ಎಲ್ ಕಾರ್ಖಾನೆಗೆ ತಲುಪಿದ್ದಾರೆ. ನಂತರ ಕಾರ್ಖಾನೆ ಸಂಸ್ಥಾಪಕ, ಶ್ರೇಷ್ಠ ತಂತ್ರಜ್ಞ ಸರ್.ವಿ ವಿಶ್ವೇಶ್ವರಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆಷಿನ್ ಶಾಪ್, ಪ್ರೈಮರಿ ಮಿಲ್, ಬಾರ್ ಮಿಲ್ ಮತ್ತು ಪೋರ್ಚ್ ಶಾಪ್ ವೀಕ್ಷಣೆ ನಡೆಸಿದರು. ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಹಾಗು ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡರು.
ಡಾ. ಅಶೋಕ್ ಕುಮಾರ್ ಪಾಂಡರವರ ಈ ಭೇಟಿ ಕಾರ್ಮಿಕ ವಲಯದಲ್ಲಿ ಸಂತಸ ಮೂಡಿಸಿದ್ದು, ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಹತ್ವ ಪಡೆದುಕೊಂಡಿದೆ.
