ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ, ಕಾರ್ಮಿಕರ ದಿನ ರಾಷ್ಟ್ರೀಯ ಹಬ್ಬವನ್ನಾಗಿಸಿ : ವಿ. ವಿನೋದ್
ಭದ್ರಾವತಿಯಲ್ಲಿ ಶುಕ್ರವಾರ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಕರ್ನಾಟಕ ದಲಿತ ಸಮನ್ವಯ ಸಮಿತಿ ಹಾಗು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಮಾಲಾರ್ಪಣೆ ಮಾಡಿ ಮಾತನಾಡಿದರು.
ಭದ್ರಾವತಿ: ಪ್ರತಿಯೊಬ್ಬ ಕಾರ್ಮಿಕರಿಗೂ ಗೌರವ ಲಭಿಸಬೇಕು. ಆಳುವ ಸರ್ಕಾರಗಳು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು. ಅಲ್ಲದೆ ಅಂತರಾಷ್ಟ್ರೀಯ ಕಾರ್ಮಿಕರ ದಿನ ಸರ್ಕಾರಿ ಕಾರ್ಯಕ್ರಮವನ್ನಾಗಿಸಬೇಕೆಂದು ಕರ್ನಾಟಕ ದಲಿತ ಸಮನ್ವಯ ಸಮಿತಿ ಹಾಗು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಹೇಳಿದರು.
ಅವರು ಶುಕ್ರವಾರ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಮಾಜದಲ್ಲಿ ಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದ್ದು, ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು, ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಸಂಘಟಿತ ಹಾಗು ಅಸಂಘಟಿತ ಕಾರ್ಮಿಕರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಮಹಿಳಾ ಕಾರ್ಮಿಕರು, ಕಟ್ಟಡ ಹಾಗು ಇತರೆ ನಿರ್ಮಾಣ ಕಾರ್ಮಿಕರು ಹೀಗೆ ಹಲವು ವರ್ಗದ ಕಾರ್ಮಿಕರಿದ್ದಾರೆ. ಅವರೆಲ್ಲರ ಶ್ರಮಕ್ಕೆ ನ್ಯಾಯ ಬದ್ಧವಾದ ಪ್ರತಿಫಲ ಲಭಿಸಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಅಂದು ಕಾರ್ಮಿಕರಿಗಾಗಿ ಹಲವಾರು ಕಾಯ್ದೆಗಳನ್ನು ಜಾರಿಗೆ ತಂದರು. ಅವರು ರೂಪಿಸಿರುವ ಕಾಯ್ದೆಯನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಬೇಕೆಂದರು.
ಪ್ರತಿಯೊಬ್ಬ ಕಾರ್ಮಿಕರ ಶ್ರಮಕ್ಕೆ ಗೌರವ ಲಭಿಸುವಂತಾಗಬೇಕು. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬಗಳ ವ್ಯಾಪ್ತಿಗೆ ತರುವ ಮೂಲಕ ಕೇಂದ್ರ ಮತ್ತು ರಾಜ್ಯಮಟ್ಟ, ಜಿಲ್ಲಾ ಹಾಗು ತಾಲೂಕುಮಟ್ಟದಲ್ಲಿ ಸಾರ್ವಜನಿಕರೆಲ್ಲರೂ ಸೇರಿ ಆಚರಿಸುವಂತಾಗಬೇಕು. ಆಗ ಮಾತ್ರ ಕಾರ್ಮಿಕರಿಗೆ ಗೌರವ ಸಲ್ಲಿಸುವಂತಾಗುತ್ತದೆ. ಈ ನಿಟ್ಟಿನಲ್ಲಿ ಗಮನಹರಿಸುವಂತೆ ವಿನೋದ್ ಮನವಿ ಮಾಡಿದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ರೈಲ್ವೆ ನಿಲ್ದಾಣ ಮುಂಭಾಗ ವರನಟ, ಕರ್ನಾಟಕ ರತ್ನ ಡಾ. ರಾಜಕುಮಾರ್ ರಸ್ತೆಯ ಭಾರತರತ್ನ, ಶ್ರೇಷ್ಠ ತಂತ್ರಜ್ಞ ಸರ್.ಎಂ ವಿಶ್ವೇಶ್ವರಾಯರವರ ಪ್ರತಿಮೆಗೂ ಮಾಲಾರ್ಪಣೆಗೂ ಮಾಡಲಾಯಿತು.
ಪ್ರಮುಖರಾದ ಸುರೇಶ್, ಬಾಷಾ, ಮುರುಗನ್, ರಾಜಚಾರಿ, ಸುಶೀಲ, ಗೋವಿಂದಪ್ಪ, ಪವಿತ್ರ, ಶಬರೀಶ್, ನೇತ್ರಾ, ಏಕಾಂಬರಮ್, ಸತೀಶ್, ಗಜೇಂದ್ರನ್, ವಿಜಯ್ ಕುಮಾರ್, ಭಾಗ್ಯ ಮತ್ತು ಮಂಜುಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
