ಅನೈತಿಕ ಸಂಬಂಧ : ಗಂಡನನ್ನು ಕೊಲೆ ಮಾಡಿದ್ದ ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ
೧೪ ಲಕ್ಷ ರು. ದಂಡ, ದೂರುದಾರರಿಗೆ ೫ ಲಕ್ಷ ಪರಿಹಾರ ನೀಡಲು ಆದೇಶ
ಗಂಡನನ್ನು ಕೊಲೆ ಮಾಡಿರುವ ಪತ್ನಿ ಪ್ಲೋರಾ ನ್ಯಾನ್ಸಿ
ಭದ್ರಾವತಿ: ಪ್ರಿಯಕರನೊಂದಿಗೆ ಸೇರಿ ಗಂಡನಿಗೆ ಮತ್ತು ಬರುವ ಔಷಧಿ ಹಾಕಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪತ್ನಿ ಹಾಗು ಪ್ರಿಯಕರನಿಗೆ ಗಲ್ಲು ಶಿಕ್ಷೆ ಹಾಗು ೧೪ ಲಕ್ಷ ರು. ದಂಡ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಸುಮಾರು ೬ ವರ್ಷಗಳ ಹಿಂದೆ ಜ.೧೫, ೨೦೨೦ರಂದು ನಗರಸಭೆ ವ್ಯಾಪ್ತಿಯ ವಾರ್ಡ್. ೨೦ರ ಸುರಗಿತೋಪಿನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಫ್ಲೋರಾ ನ್ಯಾನ್ಸಿ ಎಂಬ ಮಹಿಳೆಯು ರಾಜಶೇಖರಯ್ಯ ಎಂಬುವವನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಈಕೆಯ ಗಂಡ ಪ್ರಕಾಶ್ ಬಾಬುವಿಗೆ ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿದ್ದು, ಈ ಹಿನ್ನಲೆಯಲ್ಲಿ ಸಂಬಂಧಕ್ಕೆ ಅಡ್ಡಿ ಬರುತ್ತಾನೆಂದು ಇಬ್ಬರು ಸೇರಿ ಪ್ರಕಾಶ್ ಬಾಬುವಿಗೆ ಮತ್ತು ಬರುವ ಔಷದಿಯನ್ನು ಹಾಕಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿ ಪೊಲೀಸ್ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್‌ರವರು ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಈ ಇಬ್ಬರು ಆರೋಪಿತರಿಗೆ ಗಲ್ಲು ಶಿಕ್ಷೆ ಹಾಗೂ ೧೪,೦೦,೦೦೦ ರು. ದಂಡ ವಿಧಿಸಿದ್ದು, ದೂರುದಾರರಿಗೆ ಪರಿಹಾರವಾಗಿ ೫,೦೦,೦೦೦ ರು. ನೀಡಲು ಆದೇಶಿಸಿರುತ್ತಾರೆ. ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ವಾದ ಮಂಡಿಸಿದ್ದರು.

.jpeg)