ಶಾಂತಿ, ಸೌಹಾರ್ದತೆ, ಸಂಭ್ರಮದಿಂದ ಪ್ರತಿಯೊಂದು ಹಬ್ಬ ಆಚರಿಸಿ : ಪ್ರಕಾಶ್ ರಾಥೋಡ್
ಭದ್ರಾವತಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಪಾಂಡುರಂಗ ಕಲ್ಯಾಣ ಮಂಟಪದಲ್ಲಿಬಕ್ರೀದ್ ಹಬ್ಬದ ಅಂಗವಾಗಿ ಪೊಲೀಸ್ ಉಪವಿಭಾಗದಿಂದ ಶಾಂತಿ ಸಭೆ ಏರ್ಪಡಿಸಲಾಗಿತ್ತು.
ಭದ್ರಾವತಿ : ಸಮಾಜದಲ್ಲಿ ಪ್ರತಿಯೊಂದು ಹಬ್ಬ ಶಾಂತಿ, ಸೌಹಾರ್ದತೆ, ಸಂಭ್ರಮದಿಂದ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇದನ್ನು ಎಲ್ಲರೂ ಅರಿತುಕೊಳ್ಳಬೇಕೆಂದು ನಗರದ ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಹೇಳಿದರು.
ಅವರು ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಪಾಂಡುರಂಗ ಕಲ್ಯಾಣ ಮಂಟಪದಲ್ಲಿಬಕ್ರೀದ್ ಹಬ್ಬದ ಅಂಗವಾಗಿ ಪೊಲೀಸ್ ಉಪವಿಭಾಗದಿಂದ ಏರ್ಪಡಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಯಾವುದೇ ಧರ್ಮದ ಹಬ್ಬವಿರಲಿ ಶಾಂತಿ, ಸೌಹಾರ್ದತೆ ಮತ್ತು ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲು ಮುಂದಾಗಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಹ್ವಾನ ನೀಡಬಾರದು. ತಾಲೂಕಿನಾದ್ಯಂತ ಬಕ್ರೀದ್ ಹಬ್ಬ ಯಶಸ್ವಿಯಾಗಿ ನಡೆಯಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ. ಒಂದು ವೇಳೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಪ್ರಮುಖರಾದ ನಗರಸಭೆ ಉಪಾಧ್ಯಕ್ಷ ಬಷೀರ್ ಅಹಮದ್, ಅಂಜುಮನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ ಅಯುಬ್ ಖಾನ್, ಮಾಜಿ ಅಧ್ಯಕ್ಷರಾದ ಫೀರ್ ಷರೀಬ್, ದಿಲ್‌ದಾರ್, ಅಮೀರ್‌ಜಾನ್, ಚನ್ನೇಶ್, ಫೋಕಸ್ ಮಂಜುನಾಥ್, ರಾಘವನ್ ವಡಿವೇಲು ಮುಂತಾದವರು ಮಾತನಾಡಿ, ಹಬ್ಬವನ್ನು ಶಾಂತಿ, ಸೌಹಾರ್ದ ತೆಯಿಂದ ಆಚರಿಸಲು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವುದಾಗಿ ತಿಳಿಸಿದರು.
ಪೊಲೀಸ್ ವೃತ್ತ ನಿರೀಕ್ಷಕರಾದ ಕೆ. ನಾಗಮ್ಮ, ಚಿದಾನಂದ, ಠಾಣಾ ಉಪ ನಿರೀಕ್ಷಕರಾದ ಕವಿತಾ, ಸುನೀಲ್ ಕುಮಾರ್ ಬಿ ತೇಲಿ, ಶಿಲ್ಪನಾಯನೇಗಲಿ, ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
