ವಿನಾಕಾರಣ ಯಾವುದೋ ನೆಪ್ಪವೊಡ್ಡಿ ಹಕ್ಕು ಪತ್ರ ನೀಡದೆ ತೊಂದರೆ ಕೊಡದಿರಿ 

೧ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ 


ಭದ್ರಾವತಿ ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ೧ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಭದ್ರಾವತಿ: ವಿನಾಕಾರಣ ತಾಲೂಕು ಆಡಳಿತ ಯಾವುದೋ ನೆಪವೊಡ್ಡಿ ಕ್ಷೇತ್ರದಲ್ಲಿ ೫೦-೬೦ ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಹಕ್ಕು ಪತ್ರ ನೀಡದಿರುವುದು ಸರಿಯಲ್ಲ. ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಸಹ ಬಗೆಹರಿಸಿಕೊಂಡು ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲು ಮುಂದಾಗಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು. 
    ಅವರು ಬುಧವಾರ ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ೧ನೇ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಕ್ಷೇತ್ರದಲ್ಲಿರುವ ಅರ್ಹ ಫಲಾನುಭವಿಗಳಿಗೆ ಮೊದಲು ಹಕ್ಕು ಪತ್ರ ನೀಡಿ. ಎಲ್ಲದಕ್ಕೂ ಅರಣ್ಯ ಇಲಾಖೆ ನೆಪಮಾಡಿ ಹಕ್ಕು ಪತ್ರ ನೀಡದೆ ತೊಂದರೆ ಕೊಡುತ್ತಿರುವುದು ಸರಿಯಲ್ಲ. ಅರಣ್ಯ ಇಲಾಖೆಯವರು ಮನೆ ಕಟ್ಟಿಕೊಳ್ಳುವಾಗ ಸುಮ್ಮನಿರುತ್ತಾರೆ. ಜಾಗಕ್ಕೆ ಎನ್‌ಓಸಿ ಕೊಡುವಾಗ ಜಾಗ ನಮ್ಮದು ಎಂದು ತಕರಾರು ಮಾಡುತ್ತಾರೆ. ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುವ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಆ ಕುಟುಂಬ ಎಲ್ಲಿಗೆ ಹೋಗಬೇಕು. ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಎಫ್‌ಓ), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲು ದಿನಾಂಕ ನಿಗದಿಪಡಿಸಿ ಮುಂದಿನ ೧೫ ದಿನದೊಳಗಾಗಿ ಹಕ್ಕುಪತ್ರ ನೀಡಲು ಸಿದ್ದತೆ ಮಾಡಿಕೊಳ್ಳಿ ಎಂದು ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಸೂಚಿಸಿದರು.  
     ಸಭೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರು ಕೇಳಿ ಬಂದವು. ಅಂಗಡಿ ಮಾಲೀಕರು ತಿಂಗಳಿಗೆ ೩ ದಿನ ಮಾತ್ರ ಬಾಗಿಲು ತೆಗೆಯುವುದನ್ನು ಬಿಟ್ಟು ತಿಂಗಳ ಪೂರ್ತಿ ಬಾಗಿಲು ತೆಗೆದು ಪಡಿತರ ನೀಡಬೇಕು. ತಿಂಗಳ ಪೂರ್ತಿ ಬಾಗಿಲು ತೆರೆಯದ ಅಂಗಡಿಗಳಿಗೆ ನೋಟೀಸು ನೀಡಿ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿ, ಪಡಿತರ ಚೀಟಿಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಕುರಿತು ಸಾರ್ವಜನಿಕರಿಗೆ  ಮಾಹಿತಿ ನೀಡಿ ಎಂದರು. 
    ಈ ನಡುವೆ ತಾಲೂಕು ಪಂಚಾಯತಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಆಶಾಲತಾ, ಪಡಿತರ ಚೀಟಿ ತಿದ್ದುಪಡಿ ಕುರಿತಂತೆ ಎಲ್ಲಾ ಗ್ರಾಮಪಂಚಾಯತಿ ಪಿಡಿಓಗಳು ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸದ ಗಾಡಿ ಮೂಲಕ ಸಾರ್ವಜನಿಕರಿಗೆ ಮಾಹಿತಿ ಮುಟ್ಟಿಸಬೇಕು. ಅಲ್ಲದೆ ಹತ್ತಿರದ ಗ್ರಾಮ ಒನ್, ಸೈಬರ್ ಸೆಂಟರ್‌ಗಳಲ್ಲಿ ಹಾಗೂ ಪಡಿತರ ವಿತರಕರ ಅಂಗಡಿಗಳಲ್ಲಿಯೂ ನಾಮಫಲಕ ಹಾಕುವಂತೆ ಸೂಚಿಸಬೇಕೆಂದರು. 
    ತಾಲೂಕಿನ ಕೂಡ್ಲಿಗೆರೆ, ಬಾರಂದೂರು, ಬಿಳಿಕಿ ಗ್ರಾ.ಪಂ. ವ್ಯಾಪ್ತಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶುದ್ದಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪವಿದೆ. ಅಲ್ಲದೆ ಸರಿಯಾಗಿ ಆಲಂ ಬಳಕೆ ಮಾಡುತ್ತಿಲ್ಲ ಎಂದು ದೂರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು  ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಜಾಗೃತಿ ವಹಿಸಬೇಕೆಂದರು.  
    ವಿದ್ಯುತ್ ಕಡಿತದಿಂದ ಕಂಬದಾಳು ಹೊಸೂರು ಗ್ರಾಮ ಪಂಚಾಯತಿ ಪ್ಯಾಪ್ತಿಯಲ್ಲಿ ಸರಿಯಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ೪ ದಿನಕ್ಕೊಮ್ಮೆ ನೀರು ಬಿಡಬೇಕಾಗಿದೆ ಎಂದು ಹಾಜರಿದ್ದ ಅಲ್ಲಿನ ಗ್ರಾಮಪಂಚಾಯತಿ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಧಿಕಾರಿಗಳ ವಿರುದ್ದ ದೂರಿದರು.
    ತಹಸೀಲ್ದಾರ್ ಪರುಸಪ್ಪ ಕುರುಬರ ಸಭೆಯಲ್ಲಿ ಮಾಹಿತಿ ನೀಡಿ, ೯೪ ಸಿ ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ೪೦೨೪ ಅರ್ಜಿಗಳು ಬಂದಿದ್ದು, ಈ ಪೈಕಿ ೨೪೪೮ ಮನೆಗಳ ಹಕ್ಕುಪತ್ರ ಸಿದ್ದವಾಗಿವೆ. ಹಲವು ಕಾರಣಗಳಿಂದಾಗಿ ೧೫೩೯ ಅರ್ಜಿಗಳು ತಿರಸ್ಕೃತಗೊಂಡಿವೆ. ಅಂತಹವರಿಗೆ ಕಾರಣ ಹೇಳಿ ಹಿಂಬರಹ ಕೊಡಲಾಗಿದೆ ಎಂದರು.
    ಬಹುತೇಕ ತಿರಸ್ಕೃತ ಅರ್ಜಿಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿವೆ. ಅರಣ್ಯ ಇಲಾಖೆ ಎನ್ ಒ ಸಿ ನೀಡದ ಕಾರಣ ನಾವು ಹಕ್ಕುಪತ್ರ ಕೊಡಲು ಸಾಧ್ಯವಾಗುತ್ತಿಲ್ಲ. ೨೦ -೩೦ ವರ್ಷಗಳ ಹಿಂದೆ ಮನೆ ಕಟ್ಟಿಕೊಂಡಿದ್ದರೆ ಅಂತಹ ಮನೆಗಳಿಗೆ ಅರಣ್ಯ ಇಲಾಖೆ ಎನ್‌ಓ ಸಿ ಕೊಡಬಹುದು ಎಂದು ಸಲಹೆ ನೀಡಿದರು.
     ಬಗರ್ ಹುಕುಂ ಪ್ರಕರಣಗಳಲ್ಲಿ ೧೬೯೫೭ ಅರ್ಜಿಗಳು ಬಂದಿದ್ದು, ಎಲ್ಲಾ ಅರ್ಜಿಗಳೂ ತಿರಸ್ಕೃತಗೊಂಡಿವೆ. ಇವೆಲ್ಲವೂ ಶೇ.೯೦ರಷ್ಟು ಅರಣ್ಯ ಭೂಮಿಯಲ್ಲಿವೆ ಎಂದರು.
    ಆಹಾರ ಇಲಾಖೆ ಅಧಿಕಾರಿ ಎ.ಟಿ ಬಸವರಾಜ್ ಸಭೆಯಲ್ಲಿ ಮಾಹಿತಿ ನೀಡಿ, ಎಪಿಎಲ್ ಪಡಿತರ ಚೀಟಿಯಾಗಿ ಪರಿವರ್ತಿಸಲಾದ ಕಾರ್ಡ್‌ಗಳ ಸಂಖ್ಯೆ ೧೪೦೦, ಬಿಪಿಎಲ್ ಪಡಿತರ ಚೀಟಿಯಾಗಿ ಪರಿವರ್ತಿಸಲಾದ ಕಾರ್ಡ್‌ಗಳ ಸಂಖ್ಯೆ ೧೭೧, ಬಾಕಿ ಇರುವ ಅರ್ಜಿ ೮೯ ಎಂದರು.
    ಸಭೆಯಲ್ಲಿ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ಹನುಮಾನಾಯ್ಕ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್, ಅಧಿಕಾರಿ ಉಪೇಂದ್ರ, ಕೆಡಿಪಿ ಸದಸ್ಯರಾದ ಮಂಜಪ್ಪ, ರಮೇಶ್, ರಾಜೇಂದ್ರ, ಜಯಲಕ್ಷ್ಮಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸಭೆಯಲ್ಲಿ ಮೆಸ್ಕಾಂ, ಅಬಕಾರಿ ಇಲಾಖೆ, ಕೃಷಿ, ಅರಣ್ಯ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.