ಹಿಂದೂ ಧರ್ಮಕ್ಕೆ ಮರಳಿದ ಯುವತಿ : ಮೇ.೨೪ರಂದು ವಿವಾಹ



ಹಿಂದೂ ಧರ್ಮದ ಯುವಕನನ್ನು ಮದುವೆಯಾಗುತ್ತಿರುವ ಕ್ರೈಸ್ತ ಧರ್ಮದ ಯುವತಿಯನ್ನು ಗುರುವಾರ ಮರಳಿ ಮಾತೃ ಧರ್ಮಕ್ಕೆ ಕರೆತರುವಲ್ಲಿ ಭದ್ರಾವತಿ ವಿಶ್ವ ಹಿಂದೂ ಪರಿಷತ್ ಯಶಸ್ವಿಯಾಗಿದೆ. 
    ಭದ್ರಾವತಿ: ಹಿಂದೂ ಧರ್ಮದ ಯುವಕನನ್ನು ಮದುವೆಯಾಗುತ್ತಿರುವ ಕ್ರೈಸ್ತ ಧರ್ಮದ ಯುವತಿಯನ್ನು ಗುರುವಾರ ಮರಳಿ ಮಾತೃ ಧರ್ಮಕ್ಕೆ ಕರೆತರುವಲ್ಲಿ ವಿಶ್ವ ಹಿಂದೂ ಪರಿಷತ್ ಯಶಸ್ವಿಯಾಗಿದೆ. 
    ನಗರಸಭೆ ವ್ಯಾಪ್ತಿಯ ಸೀಗೇಬಾಗಿ, ಹನುಮಂತನಗರದ ಬಡ ಕುಟುಂಬದ ನಿವಾಸಿಯಾಗಿರುವ ಯುವತಿ ತಾಲೂಕಿನ ಅಂತರಗಂಗೆ ಕೆ.ಎಚ್ ನಗರ ನಿವಾಸಿ ಎಂ. ಶಿವಕುಮಾರ್‌ನನ್ನು ಪ್ರೀತಿಸುತ್ತಿದ್ದು, ಇಬ್ಬರು ವಿವಾಹವಾಗಲು ಬಯಸಿ ಉಚಿತ ಸಾಮೂಹಿಕ ವಿವಾಹದಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ವಿಶ್ವ ಹಿಂದೂ ಪರಿಷತ್‌ಗೆ ಕೋರಿದ್ದರು. 
    ವಿಶ್ವ ಹಿಂದೂ ಪರಿಷತ್ ವಿವಾಹವನ್ನು ಹಿಂದೂ ಧರ್ಮದ ಸಂಪ್ರದಾಯದಂತೆ ನಡೆಸಲಾಗುತ್ತದೆ. ಈ ಹಿನ್ನಲೆಯಲ್ಲಿ ಯುವತಿಗೆ ಹಿಂದೂ ಧರ್ಮ ಸ್ವೀಕರಿಸುವಂತೆ ತಿಳಿಸಿದ್ದರು. 
    ಯುವತಿಯ ಕುಟುಂಬದವರು ಮೂಲತಃ ಹಿಂದೂ ಧರ್ಮದವರಾಗಿದ್ದು, ಯಾವುದೋ ಕಾರಣಕ್ಕೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಯುವತಿಗೆ ತಾಯಿ ಮಾತ್ರ ಇದ್ದು, ಯುವತಿ ಸ್ವಯಂ ಪ್ರೇರಣೆಯಿಂದ ಹಿಂದೂ ಧರ್ಮಕ್ಕೆ ಮರಳುವುದಾಗಿ ತಿಳಿಸಿದ್ದು, ಈ ಹಿನ್ನಲೆಯಲ್ಲಿ ಜನ್ನಾಪುರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಬ್ರ ಕೃಷ್ಣಮೂರ್ತಿ ಸೋಮಯಾಜಿ ಹಾಗು ಅರ್ಚಕ ವೇ.ಬ್ರ.ಶಂಕರ್ ರವರ ಪೌರೋಹಿತ್ಯದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ  ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು.
    ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾ. ರಾಮಪ್ಪ, ಜಿಲ್ಲಾ ಉಪಾಧ್ಯಕ್ಷ ಡಿ.ಆರ್ ಶಿವಕುಮಾರ್, ಪ್ರಮುಖರಾದ ಎಲ್. ಚಂದ್ರಪ್ಪ, ಆರ್. ಸಿದ್ದರಾಮಯ್ಯ, ಎಸ್. ಬದರಿನಾಥ್, ಎಂ.ಕೃಷ್ಣಮೂರ್ತಿ, ಹೇಮಾವತಿ, ಲೀಲಾ ರೇಣುಕಯ್ಯ, ವಿ. ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
    ಮೇ.೨೪ರ ಭಾನುವಾರ ಸಿದ್ದಾರೂಢ ನಗರದಲ್ಲಿರುವ ಧರ್ಮ ಶ್ರೀ ಸಭಾ ಭವನದಲ್ಲಿ ೪೨ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಯುವತಿ ಎಂ. ಶಿವಕುಮಾರ್ ಕೈ ಹಿಡಿಯಲಿದ್ದು, ಸಂಭ್ರಮ ಮನೆ ಮಾಡಿದೆ.