ತಾಲೂಕಿನೆಲ್ಲೆಡೆ ಸಂಭ್ರಮದ ಶಾಲಾ ಪ್ರಾರಂಭೋತ್ಸವ
ಗುಲಾಬಿ, ಹೂ ಗುಚ್ಛ, ಲೇಖನಿ ನೀಡಿ ಸ್ವಾಗತ
ಭದ್ರಾವತಿ: ತಾಲೂಕಿನ ಸರ್ಕಾರಿ, ಅನುದಾನಿತ ಹಾಗು ಅನುದಾನಿತ ರಹಿತ ಒಟ್ಟು ಸುಮಾರು ೪೪೮ ಶಾಲೆಗಳಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಭದ್ರಾವತಿ: ತಾಲೂಕಿನ ಸರ್ಕಾರಿ, ಅನುದಾನಿತ ಹಾಗು ಅನುದಾನಿತ ರಹಿತ ಒಟ್ಟು ಸುಮಾರು ೪೪೮ ಶಾಲೆಗಳಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತೆ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಶಾಲೆಯಲ್ಲಿ ಸ್ವಚ್ಛತೆ ಹಾಗು ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು.
ಬೆಳಿಗ್ಗೆ ಶಾಲೆಗೆ ಆಗಮಿಸಿದ ಮಕ್ಕಳನ್ನು ಬಹುತೇಕ ಶಾಲೆಗಳಲ್ಲಿ ಶಿಕ್ಷಕರು, ಸಿಬ್ಬಂದಿಗಳು ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿದರು. ಕೆಲವು ಶಾಲೆಗಳಲ್ಲಿ ವಿಶಿಷ್ಟವಾಗಿ ತಾವೇ ಸಿದ್ದಪಡಿಸಿರುವ ಆಕರ್ಷಕವಾದ ಹೂ ಗುಚ್ಛ ಹಾಗು ಗುಲಾಬಿ ಮಾದರಿಗಳನ್ನು ನೀಡಲಾಯಿತು. ಇನ್ನೂ ಕೆಲವು ಶಾಲೆಗಳನ್ನು ಲೇಖನಿ(ಪೆನ್ನು)ಗಳನ್ನು ನೀಡಲಾಯಿತು. ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ನಂತರ ಶಿಕ್ಷಕರು-ಪೋಷಕರ ಮಹಾಸಭೆ ಏರ್ಪಡಿಸಿ ಶಾಲೆಯಲ್ಲಿ ಮುಂದಿನಗಳಲ್ಲಿ ಕೈಗೊಳ್ಳಬೇಕಿರುವ ಶೈಕ್ಷಣಿಕ ಚಟುವಟಿಗಳು, ಕೈಗೊಳ್ಳಬಹುದಾದ ಸುಧಾರಣೆಗಳು, ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮಹಾಸಭೆಯಿಂದ ಶಾಲೆ ಮತ್ತು ಶಿಕ್ಷಕರ ನಡುವೆ ಬಾಂಧವ್ಯ ವೃದ್ಧಿಸಲಿದೆ. ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.
ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾದಿಕಾರಿ ವಿ.ಎಚ್ ಪಂಚಾಕ್ಷರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪಠ್ಯ ಪುಸ್ತಕ ವಿತರಣೆ :
ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಈಗಾಗಲೇ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ಉಳಿದಂತೆ ಮಂಗಳವಾರದಿಂದ ಸಮವಸ್ತ್ರ ವಿತರಣೆ ನಡೆಯಲಿದೆ. ಅಲ್ಲದೆ ಪಾಠ ಪ್ರವಚನಗಳು ಪ್ರಾರಂಭವಾಗಲಿವೆ ಎಂದು ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ತಿಳಿಸಿದ್ದಾರೆ.

.jpeg)
.jpeg)