ಭದ್ರಾವತಿ ತಾಲೂಕಿನಲ್ಲಿ ಜೂ.೨೦ ರಿಂದ ಎಸ್‌ಐಆರ್ ಪ್ರಕ್ರಿಯೆಗಳು ಆರಂಭ
ಜೂ.೩೦ ರಿಂದ ಜು.೨೯ರವರೆಗೆ ಮನೆ ಮನೆಗೆ, ಅ.೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ
ಭದ್ರಾವತಿ : ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಹಂತ-ಹಂತವಾಗಿ ಮತದಾರರ ಪಟ್ಟಿ ವಿಶೇಷ ಸಮU ಪರಿಷ್ಕರಣೆ(ಎಸ್‌ಐಆರ್) ಮಾಡಲು ಉದ್ದೇಶಿಸಿದ್ದು, ತಾಲೂಕಿನಲ್ಲಿ ಜೂ.೨೦ರಿಂದ ಈ ಸಂಬಂಧ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಪರುಸಪ್ಪ ಕುರುಬರ ತಿಳಿಸಿದರು.
ಅವರು ಬುಧವಾರ ತಮ್ಮ ಕಛೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿ ಮಾಹಿತಿ ನೀಡಿದರು. ಜೂ.೨೦ರಿಂದ ೨೯ರವರೆಗೆ ಸಿದ್ದತೆ, ತರಬೇತಿ ಹಾಗು ಮುದ್ರಣ ಕಾರ್ಯಗಳು ನಡೆಯಲಿವೆ. ಜೂ.೩೦ ರಿಂದ ಜು.೨೯ರವರೆಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದು, ನಂತರ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಆ.೫ರಂದು ಮತದಾರರ ಪಟ್ಟಿ ಬಿಡುಗಡೆಗೊಳಿಸಲಿದ್ದು, ಸೆ.೪ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅ.೩ರವರೆಗೆ ಆಕ್ಷೇಪಣೆಗಳ ಪರಿಶೀಲನೆ ನಡೆಯಲಿದ್ದು, ಅ.೭ರಂದು ಅಂತಿಮ ಮತದಾರರ ಪಟ್ಟಿ ಬಿಡುಯಾಗಲಿದೆ ಎಂದರು.
ಮತದಾರರ ಪಟ್ಟಿಯನ್ನು ದೋಷರಹಿತವಾಗಿ ರೂಪಿಸುವುದು. ೧೮ ವರ್ಷ ಪೂರ್ಣಗೊಳಿಸಿದ ಅರ್ಹ ಯುವ ಮತದಾರರನ್ನು ಪಟ್ಟಿಗೆ ಸೇರಿಸುವುದು ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಎಲ್ಲಾ ಮತಗಟ್ಟೆಗಳಿಗೆ ಮತಗಟ್ಟೆ ಏಜೆಂಟರನ್ನು ನೇಮಿಸಿ, ಚುನಾವಣಾ ಶಾಖೆಗೆ ಅವರ ವಿವರಗಳನ್ನು ಒದಗಿಸುವುದು. ಪರಿಷ್ಕರಣೆ ಸಂದರ್ಭದಲ್ಲಿ ಮತಗಟೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹ ಕರಿಸುವಂತೆ ಮನವಿ ಮಾಡಿದರು.
೨೦೦೨ರ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ಹಾಗೂ ೨೦೨೫ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುವುದು. ಬಿಎಲ್‌ಒಗಳು ಮನೆ ಮನೆ ಭೇಟಿಯ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ದ್ವಿತಿಯಲ್ಲಿ ನೀಡಿ, ಹೊಸ ಮಾಹಿತಿಯನ್ನು ಹಿಂಪಡೆದು, ಅದರಲ್ಲಿ ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂದಿರುಗಿಸಲಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ಸೂಚಿಸಿದ ೧೨ ರೀತಿಯ ಮಾಹಿತಿಯಲ್ಲಿ ಯಾವುದಾದರೊಂದನ್ನು ಪುರಾವೆಯಾಗಿ ಪಡೆದುಕೊಳ್ಳುವರು ಎಂದರು.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಶಿಕ್ಷಕರು ಹಾಗು ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ಬಳಸಿಕೊಳ್ಳಲಾಗುವುದು. ತಿ ಬೂತ್‌ಗೆ ಏಜೆಂಟರ್‌ಗಳನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಿ ೧೧೨-ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ೨೫೩ ಭಾಗಗಳಿದ್ದು, ೧,೦೫,೨೯೬ ಪುರುಷ ಹಾಗು ೧,೧೨,೭೬೨ ಮಹಿಳಾ ಮತ್ತು ತೃತೀಯ ಲಿಂಗ ೫ ಮಂದಿ ಸೇರಿ ಒಟ್ಟು ೨,೧೮,೦೬೩ ಮತದಾರರನ್ನು ಎಸ್‌ಐಆರ್ ಪರಿಷ್ಕರಣೆಗೆ ಒಳಪಡಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಸತ್ಯನಾರಾಯಣ, ಜಿಲ್ಲಾ ಚುನಾವಣಾ ಸಹಾಯಕ ಅಧಿಕಾರಿ ರಿಯಾಜ್ ಅಹಮದ್ ಉಪಸ್ಥಿತರಿದ್ದರು.
ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಾದ ಆರ್. ಕರುಣಾಮೂರ್ತಿ, ಎಸ್. ಕುಮಾರ್, ಎಂ. ಶಿವಕುಮಾರ್, ಎನ್. ರಾಮಕೃಷ್ಣ, ತೀರ್ಥೇಶ್, ಅನಂತರಾಮು, ಗಿರಿನಾಯ್ಡು, ಸಿ. ಜಯಪ್ಪ, ಮುಸ್ವೀರ್ ಬಾಷಾ, ಚಂದ್ರಶೇಖರ್, ಶಿವೇಗೌಡ್ರು, ಜುಂಜ್ಯಾನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
