ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ : ನಿಯಂತ್ರಿಸಲು ಆಗ್ರಹ 



ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರದ ಪ್ರಮುಖ ವಾಣಿಜ್ಯ ರಸ್ತೆಯಲ್ಲಿ ರಾತ್ರಿ ವೇಳೆ ಬೀದಿ ನಾಯಿಗಳು ಒಂದೆಡೆ ಮಲಗಿರುವುದು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ನಿವಾಸಿಗಳು ಒಬ್ಬಂಟಿಯಾಗಿ ರಸ್ತೆಗಳಲ್ಲಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣಗೊಂಡಿದೆ. 
    ಬೀದಿ ನಾಯಿಗಳ ನಿಯಂತ್ರಣಕ್ಕೆ ಸರ್ವೋಚ್ಛ ನ್ಯಾಯಾಲಯ ಸ್ಥಳೀಯ ಸಂಸ್ಥೆಗಳಿಗೆ ಮಾರ್ಗಸೂಚಿ ನೀಡಿದೆಯಾದರೂ ಇಲ್ಲಿನ ನಗರಸಭೆ ಆಡಳಿತದ ನಿರ್ಲಕ್ಷ್ಯತನದಿಂದಾಗಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ನಗರಸಭೆ ವ್ಯಾಪ್ತಿಯ ಎಲ್ಲಾ ೩೫ ವಾರ್ಡ್‌ಗಳಲ್ಲೂ ಇದೀಗ ಸಮಸ್ಯೆ ಉಲ್ಬಣಗೊಂಡಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ನಗರಸಭೆ ಆಡಳಿತ ಮೌನ್ಯಕ್ಕೆ ಶರಣಾಗಿದೆ. 
    ಒಂದೇ ಸ್ಥಳದಲ್ಲಿ ಕನಿಷ್ಠ ಸುಮಾರು ೧೦-೧೫ ಬೀದಿ ನಾಯಿಗಳು ಗುಂಪು ಸೇರುತ್ತಿವೆ. ಬೆಳಿಗ್ಗೆ ಮತ್ತು ರಾತ್ರಿ ವೇಳೆ ಬೀದಿಗಳಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಒಬ್ಬಂಟಿಯಾಗಿ ಸಂಚರಿಸಲು ಭಯಪಡುವಂತಾಗಿದೆ. ಬೆಳಗಿನ ಜಾವ ದಿನ ಪತ್ರಿಕೆ ಹಾಗು ಹಾಲು ವಿತರಿಸುವವರು ಸಹ ಭಯದಲ್ಲಿಯೇ ತಮ್ಮ ಕೆಲಸ ಮಾಡುವಂತಾಗಿದೆ. ಕೆಲವೆಡೆ ಇವರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆಗಳು ಸಹ ನಡೆದಿವೆ. ಇದೀಗ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು, ಶಾಲಾ ಮಕ್ಕಳು ನಿರ್ಭೀತಿಯಿಂದ ಓಡಾಡದಂತಹ ಸ್ಥಿತಿ ನಿರ್ಮಾಣಗೊಂಡಿದೆ. 


ಭದ್ರಾವತಿ ನಗರಸಭೆ ವ್ಯಾಪ್ತಿಯ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಆವರಣದಲ್ಲಿ ಹಗಲು ಹೊತ್ತಿನಲ್ಲಿ ಬೀದಿ ನಾಯಿಗಳ ಹಿಂಡು.  
    ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಗರಸಭೆ ಆಡಳಿತ ಪ್ರತಿ ವರ್ಷ ಲಕ್ಷಾಂತರ ರು. ವ್ಯಯ ಮಾಡಿ ಸಂತಾನಹರಣ ಚಿಕಿತ್ಸೆ ಕೈಗೊಳ್ಳುತ್ತಿದ್ದು,  ಆದರೂ ಸಹ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸರ್ವೋಚ್ಛ ನ್ಯಾಯಾಲಯ ಬೀದಿ ನಾಯಿಗಳ ನಿಯಂತ್ರಣಕ್ಕೆ ಮಾರ್ಗಸೂಚಿ ಸಹ ಹೊರಡಿಸಿದೆ. ಆದರೆ ನಗರಸಭೆ ಆಡಳಿತ ಮಾರ್ಗ ಸೂಚಿ ಅನುಸರಿಸದಿರುವುದು ಸಮಸ್ಯೆ ಉಲ್ಬಣಗೊಳ್ಳಲು ಕಾರಣ ಎನ್ನಲಾಗಿದೆ. ತಕ್ಷಣ ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ನಗರಸಭೆ ಆಡಳಿತ ಮುಂದಾಗಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.