ಜೂ.೧೩ರಂದು ಸುಮಾರು ೨೫ ಸಾವಿರ ಉಚಿತ ಬರವಣಿಗೆ ಪುಸ್ತಕ ವಿತರಣೆ 

ಕಳೆದ ೯ ವರ್ಷಗಳಿಂದ ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವ ಎ. ಧರ್ಮೇಂದ್ರ


    ಭದ್ರಾವತಿ : ಕಳೆದ ೯ ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬರವಣಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ಸಮಾಜ ಸೇವಕ ಎ. ಧಮೇಂದ್ರರವರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಈ ಬಾರಿ ಸಹ ಜೂ.೧೩ರಂದು ಸುಮಾರು ೨೫ ಸಾವಿರ ಬರವಣಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. 
    ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಮೂಲಕ ಧಮೇಂದ್ರರವರು ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ೯ ವರ್ಷಗಳ ಹಿಂದೆ ಸರ್ಕಾರಿ ಶಾಲೆಯ ೫೦೦ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಇದೀಗ ೫೦೦೦ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. 
    ಕಳೆದ ವರ್ಷ ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೩, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೨ ಹಾಗು ನಾಗತಿಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೧ ಸರ್ಕಾರಿ ಶಾಲೆಗಳ ಮಕ್ಕಳಿಗೆ ಒಟ್ಟು ಸುಮಾರು ೧೮ ಸಾವಿರ ಪುಸ್ತಕಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರು. 
    ಈ ಬಾರಿ ಕುಮಾರಿ ನಾರಾಯಣಪುರ, ತಳ್ಳಿಕಟ್ಟೆ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ತಾಂಡ, ಆಟಿಕೆರೆ ಕ್ಯಾಂಪ್, ಜಯನಗರ, ಅರಳಿಹಳ್ಳಿ, ದೇವರಹಳ್ಳಿ, ವಿಜಯನಗರ, ವೀರಾಪುರ, ರಾಮನಗರ, ಗುಡ್ಡದನೇರಳೆಕೆರೆ, ತಿಮ್ಲಾಪುರ, ಕೊಮಾರನಹಳ್ಳಿ, ಸೀಗೆಬಾಗಿ, ಜಯನಗರ ಕ್ಯಾಂಪ್, ಭದ್ರಾ ಕಾಲೋನಿ, ಬಾಬಳ್ಳಿ, ಕಾಗೇಕೋಡಮಗ್ಗಿ, ಸಂಜೀವ್ ನಗರ, ಸಿದ್ದರಾಮಮಟ್ಟಿ ಹಾಗು ಇನ್ನಿತರ ಗ್ರಾಮಗಳ ೪೫ ಶಾಲೆಗಳ ಮಕ್ಕಳಿಗೆ ಒಟ್ಟು ೨೫ ಸಾವಿರ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. 
    ಕಡು ಬಡತನದಲ್ಲಿ ಹುಟ್ಟಿ ಬೆಳೆದು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಧಮೇಂದ್ರರವರು ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣ ಪಡೆಯಲು ನನ್ನಂತೆ ಸಂಕಷ್ಟಕ್ಕೆ ಒಳಗಾಗಬಾರದು ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಉಚಿತ ಬರವಣಿಗೆ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಪ್ರತಿ ವರ್ಷ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಬರವಣಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ಕಳೆದ ೯ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.  
    ಉಚಿತ ಬರವಣಿಗೆ ಪುಸ್ತಕ ವಿತರಣೆ ಮಾತ್ರವಲ್ಲದೆ ಮಹಾಮಾರಿ ಕೋವಿಡ್-೧೯ರ ಸಂದರ್ಭದಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಮೇಂದ್ರರವರು ಮುಂದಾಗಿದ್ದರು. 
    ಬಾಲಿ ಇಂಡಿಯಾ ಇಂಟರ್ ನ್ಯಾಷನಲ್ ಐಕಾನಿಕ್ ಆವಾರ್ಡ್-೨೦೨೫ ಪ್ರಶಸ್ತಿ ಪುರಸ್ಕೃತರು: 
    ಯಾವುದೇ ದುರುದ್ದೇಶವಿಲ್ಲದೆ, ಪ್ರಚಾರದ ಗೀಳಿಗೆ ಒಳಗಾಗದೆ ಸೇವಾ ಕಾರ್ಯಗಳಲ್ಲಿ ಮುಕ್ತ ಮನಸ್ಸಿನಿಂದ ತೊಡಗಿಸಿಕೊಂಡಿರುವ ಎ. ಧರ್ಮೇಂದ್ರ ಅವರನ್ನು ಗುರುತಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಬಾಲಿ ಇಂಡಿಯಾ ಇಂಟರ್ ನ್ಯಾಷನಲ್ ಐಕಾನಿಕ್ ಆವಾರ್ಡ್-೨೦೨೫ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಧಮೇಂದ್ರರವರು ತಮ್ಮ ಸೇವಾ ಕಾರ್ಯಗಳನ್ನು ನೋಡಿ ಇತರರು ಸಹ ತಮ್ಮಂತೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಶಯ ಹೊಂದಿದ್ದಾರೆ. 
    ಜೂ.೧೩ರಂದು ಉಚಿತ ನೋಟ್ ಪುಸ್ತಕ ವಿತರಣೆ :
    ಜೂ.೧೩ರ ಬೆಳಿಗ್ಗೆ ೮ ರಿಂದ ೯ ಗಂಟೆವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮನಗರ, ೯ ರಿಂದ ೧೦ ಗಂಟೆವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಳಿಹಳ್ಳಿ ಮತ್ತು ೧೧.೩೦ ರಿಂದ ೧೨.೩೦ರ ವರೆಗೆ ಹರಿಹರೇಶ್ವರ ಪ್ರೌಢಶಾಲೆ, ಕೂಡ್ಲಿಗೆರೆ ಹಾಗೂ ಮಧ್ಯಾಹ್ನ ೨ ಗಂಟೆಯಿಂದ ೩ ಗಂಟೆವರೆಗೆ ನಂಜುಂಡೇಶ್ವರ ಪ್ರೌಢಶಾಲೆ, ನಾಗತಿಬೆಳಗಲು  ಉಚಿತ ನೋಟ್ ಪುಸ್ತಕ ವಿತರಣೆ ನಡೆಯಲಿದೆ.
    ಶಾಲಾ ಮಕ್ಕಳ ಪೋಷಕರು, ಹಿತೈಷಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಎ. ಧರ್ಮೇಂದ್ರ ಕೋರಿದ್ದಾರೆ.