ಮಾರಾಕಾಸ್ತ್ರಗಳಿಂದ ಭೀಕರ ಹಲ್ಲೆ ಪ್ರಕರಣ : ೭ ಮಂದಿ ಪೊಲೀಸರ ವಶಕ್ಕೆ


ವಿಶ್ವನಾಥ್ ಅಲಿಯಾಸ್ ಮುದ್ದೆ 
    ಭದ್ರಾವತಿ: ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನ ನಿರ್ವಹಿಸುತ್ತಿರುವ ಹಳೇನಗರದ ಶ್ರೀ ಹಳದಮ್ಮ ದೇವಸ್ಥಾನ ಸಮೀಪದ ನಿವಾಸಿ ವಿಶ್ವನಾಥ ಅಲಿಯಾಸ್ ಮುದ್ದೆ ಮೇಲೆ ಕಳೆದ ೫ ದಿನಗಳ ಹಿಂದೆ ಗುಂಪೊಂದು ಮಾರಾಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಪರಾರಿಯಾಗಿತ್ತು. ಈ ಸಂಬಂಧ ಹಳೇನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯಕ್ಕಾಗಿ ವಿಶೇಷ ರಚಿಸಿತ್ತು. ಇದೀಗ ಪ್ರಕರಣ ಸಂಬಂಧ ೭ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
    ಈ ಪ್ರಕರಣದಲ್ಲಿ ಪ್ರಕಾಶ್ ಅಲಿಯಾಸ್ ಕರಾಟೆ ಪ್ರಕಾಶ್, ಪ್ರಮೋದ್ ಅಲಿಯಾಸ್ ಗಾಂಧಿ, ಜಗದೀಶ್, ಅಲ್ವಿನ್, ಭರತ್ ಅಲಿಯಾಸ್ ಕೊಳಕ ಭರತ್, ರಾಕೇಶ್ ಅಲಿಯಾಸ್ ತುಂಬೆ, ಪ್ರಜ್ವಲ್ ಹಾಗೂ ಡಾಲ್ವಿನ್ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.
    ಪ್ರಕರಣ ಸಂಬಂಧ ಆರಂಭದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. ತನಿಖೆ ಮುಂದುವರಿದಂತೆ ಆರೋಪಿಗಳ ಸಂಖ್ಯೆ ಹೆಚ್ಚಾಗಿದ್ದು, ಮೊದಲಿಗೆ ಪ್ರಮೋದ್ ಹಾಗೂ ಜಗದೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಶುಕ್ರವಾರ ಕರಾಟೆ ಪ್ರಕಾಶ್, ಭರತ್, ರಾಕೇಶ್, ಪ್ರಜ್ವಲ್ ಹಾಗೂ ಡಾಲ್ವಿನ್ ಅವರು ನಗರದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಚೇತನ್ ಅವರ ಎದುರು ಶರಣಾಗಿದ್ದಾರೆ. ಒಟ್ಟು ೭ ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ಸಂಬಂಧ ತನಿಖೆ ಮುಂದು ವರೆಸಿದ್ದಾರೆ. 
    ರಾಜಕೀಯ ತಿರುವು ಪಡೆದ ಪ್ರಕಣ :
    ಇದೀಗ ಪ್ರಕಣ ರಾಜಕೀಯ ತಿರುವು ಪಡೆದುಕೊಂಡಿದೆ. ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ವಿಶ್ವನಾಥ್ ವಿರುದ್ಧ ಸಂಚು ರೂಪಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೀಗ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಹಿಂದೆ ಸಹ ಈ ರೀತಿ ಘಟನೆಗಳು ನಗರದಲ್ಲಿ ನಡೆದಿವೆ. ಈ ಹಿನ್ನಲೆಯಲ್ಲಿ ಸ್ಥಳಿಯವಾಗಿ ಆತಂಕ ಮನೆ ಮಾಡಿದೆ.
    ವಿಶ್ವನಾಥ್ ಸಹ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಸಹ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಹಲವರು ವೈಷಮ್ಯ ಹೊಂದಿದ್ದರು ಎನ್ನಲಾಗಿದೆ. ಹಳೇ ದ್ವೇಷದಿಂದ ಹಲ್ಲೆ ನಡೆಸಲಾಗಿದೆ ಎಂಬ ಮತ್ತೊಂದು ಆರೋಪ ಸಹ ಕೇಳಿ ಬರುತ್ತಿದೆ. 
    ಇನ್ನೊಂದೆಡೆ, ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವ ಯಾನೆ ಮುದ್ದೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಅವರು ಚೇತರಿಸಿಕೊಳ್ಳುತ್ತಿದ್ದು, ಇಂದು ಐಸಿಯುವಿನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.