ಸರ್ಕಾರಿ ಶಾಲೆಗಳ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸೇವಾ ಕಾರ್ಯಗಳು ಸಾರ್ಥಕ 


ಭದ್ರಾವತಿ ತಾಲೂಕಿನ ಅರಳಿಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು. 
- ಸಮಾಜ ಸೇವಕ ಎ. ಧರ್ಮೇಂದ್ರ ನೇತೃತ್ವದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣೆ.
-  ಸರ್ಕಾರಿ ಶಾಲೆಗಳ ಸುಮಾರು ೪,೫೦೦ ಮಕ್ಕಳಿಗೆ ಒಟ್ಟು ೨೫ ಸಾವಿರ ಬರವಣಿಗೆ ಪುಸ್ತಕ. 
- ೯ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಸೇವಾ ಕಾರ್ಯಕ್ಕೆ ಶ್ಲಾಘನೆ.  
    ಭದ್ರಾವತಿ: ಗ್ರಾಮೀಣ ಪ್ರದೇಶಗಳ ಮಕ್ಕಳು ಸಹ ತಮ್ಮ ಪ್ರತಿಭೆಗಳ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸೇವಾ ಕಾರ್ಯಗಳು ಸಾರ್ಥಕಗೊಳ್ಳುತ್ತವೆ ಎಂದು ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಎ. ಧರ್ಮೇಂದ್ರ ಹೇಳಿದರು. 
    ಅವರು ಶನಿವಾರ ತಾಲೂಕಿನ ಅರಳಿಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಬರವಣಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. 
    ಸರ್ಕಾರಿ ಶಾಲೆಗಳ ಮಕ್ಕಳು ಸಹ ಪ್ರತಿಭಾವಂತರಾಗಿದ್ದು, ಅವರ ಶಿಕ್ಷಣಕ್ಕೆ ನೆರವಾಗುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ. ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಎದುರಿಸಿದ ಸಂಕಷ್ಟಗಳು ಇಂದಿಗೂ ಮರೆಯುವಂತಿಲ್ಲ. ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗದೆ ನಂತರ ಎದುರಿಸಿದ ಸವಾಲುಗಳು ಪ್ರಸ್ತುತ ಇಂದಿನ ಸ್ಥಿತಿಗೆ ಕಾರಣವಾಗಿವೆ. ಭವಿಷ್ಯದಲ್ಲಿ ಮಕ್ಕಳು ನಮ್ಮಂತೆ ಸಂಕಷ್ಟ ಎದುರಿಸಬಾರದು. ಶ್ರಮದ ಫಲ ವ್ಯರ್ಥವಾಗಬಾರದು ಎಂಬ ಉದ್ದೇಶದೊಂದಿಗೆ ಕಳೆದ ೯ ವರ್ಷಗಳ ಹಿಂದೆ ಸಣ್ಣದ್ದಾಗಿ ಆರಂಭಿಸಿದ ಕಾರ್ಯ ಇಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸೇವಾ ಕಾರ್ಯ ನಡೆಸಲು ಭಗವಂತ ಶಕ್ತಿ ನೀಡಿರುವುದು ನನ್ನ ಸೌಭಾಗ್ಯವಾಗಿದೆ. ಮಕ್ಕಳು ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. 
     ಆಶಾರಾಣಿ ಧರ್ಮೇಂದ್ರ ಮಾತನಾಡಿ, ಮಕ್ಕಳು ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಾರಿಗೂ ತಲೆಬಾಗಬಾರದು. ಪ್ರತಿಯೊಬ್ಬರು ಸಾಧನೆ ಮಾರ್ಗದಲ್ಲಿ ಮುನ್ನಡೆಯಬೇಕೆಂದರು.  ಎಂದರು. 
     ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್ ಮಾತನಾಡಿ, ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದರೂ ಸಹ ಆ ಯೋಜನೆಗಳು ಸರಿಯಾಗಿ ಲಭಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಇಂತಹ ದಾನಿಗಳ ನೆರವು ಅಗತ್ಯವಾಗಿದೆ ಎಂದರು. 
    ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ದಿವಾಕರ್, ಯಾವುದೇ ಫಲಾಫೇಕ್ಷೆ ಇಲ್ಲದೆ ಕಳೆದ ೯ ವರ್ಷಗಳಿಂದ ನಿರಂತರವಾಗಿ ಗುಣಮಟ್ಟದ ಬರವಣಿಗೆ ಪುಸ್ತಕ ವಿತರಿಸುವ ಸೇವಾ ಕಾರ್ಯ ನಡೆಸುಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ದುಡಿಮೆಯ ಒಂದಿಷ್ಟು ಭಾಗ ಸೇವಾ ಕಾರ್ಯಕ್ಕೆ ಮೀಸಲಿಟ್ಟು, ಸರ್ಕಾರಿ ಶಾಲೆಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರುವುದು ಇತರರಿಗೆ ಮಾದರಿಯಾಗಿದೆ. ಭವಿಷ್ಯದಲ್ಲಿ ನೀವು ಸಹ ಇಂತಹ ಕಾರ್ಯಗಳನ್ನು ನಡೆಸುವಂತವರಾಗಬೇಕೆಂದರು. 
    ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮೇಗೌಡ(ಕುಂಬ್ರಿ ಚಂದ್ರಣ್ಣ), ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅರಳಿಹಳ್ಳಿ ಪ್ರಕಾಶ್, ಯು. ಮಹಾದೇವಪ್ಪ, ವಿವಿಧ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
     ಕುಮರಿ ನಾರಾಯಣಪುರ, ತಳ್ಳಿಕಟ್ಟೆ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ತಾಂಡ, ಆಟಿಕೆರೆ ಕ್ಯಾಂಪ್, ಜಯನಗರ, ಅರಳಿಹಳ್ಳಿ, ದೇವರಹಳ್ಳಿ, ವಿಜಯನಗರ, ವೀರಾಪುರ, ರಾಮನಗರ, ಗುಡ್ಡದನೇರಳೆಕೆರೆ, ತಿಮ್ಲಾಪುರ, ಕೊಮಾರನಹಳ್ಳಿ, ಸೀಗೆಬಾಗಿ, ಜಯನಗರ ಕ್ಯಾಂಪ್, ಭದ್ರಾ ಕಾಲೋನಿ, ಬಾಬಳ್ಳಿ, ಕಾಗೇಕೋಡಮಗ್ಗಿ, ಸಂಜೀವ್ ನಗರ, ಕಣಕಟ್ಟೆ, ಸಿದ್ದರಾಮಮಟ್ಟಿ ಹಾಗು ಇನ್ನಿತರ ಗ್ರಾಮಗಳ ೪೫ ಶಾಲೆಗಳ ಸುಮಾರು ೪,೫೦೦ ಮಕ್ಕಳಿಗೆ ಒಟ್ಟು ೨೫ ಸಾವಿರ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿಸಲಾಯಿತು.