ನಾಡಿನಾದ್ಯಂತ ತುಳು ಭಾಷೆ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ : ತಾರಾನಾಥ ಗಟ್ಟಿ ಕಾಪಿಕಾಡ್
ಭದ್ರಾವತಿ ನ್ಯೂಟೌನ್ ಬಂಟರ ಭವನದಲ್ಲಿ ತುಳು ಕೂಟದಿಂದ ಆಯೋಜಿಸಲಾಗಿದ್ದ ತುಳು ಉತ್ಸವ-೨೦೨೬ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉದ್ಘಾಟಿಸಿದರು.
ಭದ್ರಾವತಿ : ತುಳು ಭಾಷೆಗೆ ತನ್ನದೇ ಆದ ಪರಂಪರೆ ಇದ್ದು, ಈ ಭಾಷೆಯ ಬೆಳವಣಿಗೆಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ನಾಡಿನ ಎಲ್ಲೆಡೆ ತುಳು ಭಾಷೆ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ಭಾನುವಾರ ಮಧ್ಯಾಹ್ನ ನ್ಯೂಟೌನ್ ಬಂಟರ ಭವನದಲ್ಲಿ ತುಳು ಕೂಟದಿಂದ ಆಯೋಜಿಸಲಾಗಿದ್ದ ತುಳು ಉತ್ಸವ-೨೦೨೬ ಉದ್ಘಾಟಿಸಿ ಮಾತನಾಡಿದರು. ತುಳು ಭಾಷಿಕರು ಎಲ್ಲೆ ಇದ್ದರೂ ಸಹ ಭಾಷೆ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ತುಳುನಾಡಿನ ಸಾಹಿತ್ಯ, ಸಂಸ್ಕೃತಿ, ಭಾಷೆ ವೈವಿಧ್ಯತೆಯಿಂದ ಕೂಡಿದೆ. ಈ ಭಾಷೆಯನ್ನು ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಸಿದ ಪರಿಣಾಮ ಸರ್ಕಾರ ತುಳುನಾಡಿನ ಭಾಗದ ಶಾಲೆಗಳಲ್ಲಿ ತುಳು ಭಾಷೆಯನ್ನು ಒಂದು ಆಯ್ಕೆಯ ಭಾಷೆಯನ್ನಾಗಿಸಿದೆ. ಪ್ರಸ್ತುತ ತುಳು ಭಾಷೆ ಕಲಿಕೆಯಲ್ಲಿ ತೊಡಗಿರುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ತುಳು ಭಾಷೆ ಕಲಿಕೆಗೆ ಪ್ರೋತ್ಸಾಹಿಸಬೇಕೆಂದರು.
ನಗರದಲ್ಲಿ ತುಳು ಕೂಟ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶಿಸ್ತು, ಬದ್ಧತೆಯಿಂದ ಪದಾಧಿಕಾರಿಗಳು ಕಾರ್ಯನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತುಳು ಕೂಟದ ಅಧ್ಯಕ್ಷ ಪಿ. ಸುಧಾಕರ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯ ಕನ್ನಡ ಸಾಹಿತಿ ಕುಂಬ್ರ ದುರ್ಗಾ ಪ್ರಸಾದ್ ರೈ, ಪ್ರಧಾನ ಕಾರ್ಯದರ್ಶಿ ಡಾ. ಹರೀಶ ದೇಲಂತಬೆಟ್ಟು, ಖಜಾಂಚಿ ಡಾ. ವೈ. ಆನಂದ್, ಉಪಾಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿ ಬಿ. ಸುಬ್ಬಣ್ಣ ರೈ ಮತ್ತು ಸಹಕಾರ್ಯದರ್ಶಿ ಶಾಮರಾಯ ಆಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಪ್ರಕಾಶ್ ಪಿಂಟೋ ಸ್ವಾಗತಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಯಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಬೆಳಿಗ್ಗೆ ``ತುಳುನಾಡಿನ ಆಚರಣೆ-ಆರಾಧನೆಗಳ ಲೋಕ ದೃಷ್ಠಿ'' ಕನ್ನಡ ಜಗತ್ತಿಗೆ ತುಳು ಲೋಕದ ಪರಿಚಯ ಮಾಲಿಕೆ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯ ಕನ್ನಡ ಸಾಹಿತಿ ಕುಂಬ್ರ ದುರ್ಗಾ ಪ್ರಸಾದ್ ರೈ ತುಳುನಾಡಿನ ಕೃಷಿ, ಬದುಕಿನ ಆಚರಣೆ-ಆರಾಧನೆಗಳು ಕುರಿತು ಉಪನ್ಯಾಸ ನೀಡಿದರು. ಕವಿಗಳಾದ ದೀಪ್ತಿ ಹರ್ಷ, ನಂದಿನಿ ಮಲ್ಲಿಕಾರ್ಜುನ, ಪೂರ್ಣಿಮ ಉಡುಪ, ಅಂಬಿಕಾ ದೇವರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
