ಹಿರಿಯ ಸಮಾಜ ಸೇವಕ ಎಚ್.ವಿ ಶಿವರುದ್ರಪ್ಪ ನಿಧನ


ಎಚ್.ವಿ ಶಿವರುದ್ರಪ್ಪ 
- ೨೦೨೫ರ ನಾಡಹಬ್ಬ ದಸರಾ ಉದ್ಘಾಟಕರು.
- ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದರು.  
- ಸಂಸದರು, ಶಾಸಕರು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳಿಂದ ಸಂತಾಪ
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ, ಸಹ್ಯಾದ್ರಿ ಬಡಾವಣೆ ನಿವಾಸಿ, ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ(೮೮) ಸೋಮವಾರ ನಿಧನ ಹೊಂದಿದರು. 
ಇವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಹೆಬ್ಬಂಡಿ ಗ್ರಾಮದ ಇವರ ತೋಟದಲ್ಲಿ ಸಂಜೆ ನೆರವೇರಿತು. ಕಳೆದ ವರ್ಷ ೨೦೨೫ ನಗರಸಭೆಯಿಂದ ಆಯೋಜಿಸಲಾಗಿದ್ದ ನಾಡಹಬ್ಬ ದಸರಾ ಆಚರಣೆಯ ಉದ್ಘಾಟಕರಾಗಿ ಆಹ್ವಾನಿಸಲಾಗಿತ್ತು. 
ಶಿವರುದ್ರಪ್ಪರವರು ಮೂಲತಃ ಕೃಷಿಕರು ಹಾಗು ವ್ಯಾಪಾರಸ್ಥರಾಗಿದ್ದು, ೧೯೭೦ರಿಂದ ಸುಮಾರು ೫೫ ವರ್ಷಗಳಿಂದ ನಗರದ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿಕೊಂಡು ಬರುವ ಮೂಲಕ  ಅಜೀವ ಸದಸ್ಯರಾಗಿದ್ದರು. ಕಡದಕಟ್ಟೆ ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ೩ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಜೊತೆಗೆ ಸಹಕಾರ ಸಂಘದ ಬೆಳವಣಿಗೆಗೆ ಆರ್ಥಿಕ ನೆರವನ್ನು ನೀಡಿದ್ದರು. ಅಲ್ಲದೆ ಉತ್ತಮ ಜಿಲ್ಲಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 
    ಕಡದಕಟ್ಟೆ ಶ್ರೀ ವಿನಾಯಕ ದೇವಸ್ಥಾನದ ಸಂಸ್ಥಾಪಕ ಕಾರ್ಯದರ್ಶಿಯಾಗಿ, ತಾಲೂಕು ಕಛೇರಿ ರಸ್ತೆಯ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿಯಾಗಿ ಹಾಗು ಜನ್ನಾಪುರ ದೇವಾಲಯಗಳ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಜೊತೆಗೆ ವಿವಿಧ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವು ನೀಡಿದ್ದರು. ಪ್ರಸ್ತುತ ಜನ್ನಾಪುರ ಮಲ್ಲೇಶ್ವರ ಸಮುದಾಯ ಭವನದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.  
    ಜನ್ನಾಪುರ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದರು. ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆ ಅಜೀವ ಸದಸ್ಯರಾಗಿರುವ ಇವರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿ ಹಲವಾರು ಸೇವಾ ಕಾರ್ಯಗಳಿಗೆ ದೇಣಿಗೆ ನೀಡಿದ್ದರು. ೧೯೮೯ರಲ್ಲಿ ಅಮೇರಿಕದಲ್ಲಿ ಜರುಗಿದ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.  
ಸಂತಾಪ: 
ಶಿವರುದ್ರಪ್ಪ ಅವರ ನಿಧನಕ್ಕೆ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ವಿವಿಧ ಮಠಾಧೀಶರು, ನಗರಸಭೆ ಆಡಳಿತ, ಲಯನ್ಸ್ ಕ್ಲಬ್, ಜನ್ನಾಪುರ ದೇವಸ್ಥಾನ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.