ದೇಶದ ೧೪೦ ಕೋಟಿ ಜನರ ಹಿತಕಾಪಾಡುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿ
ಪ್ರಬುದ್ಧರ ಸಭೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆರ್.ಕೆ ಸಿದ್ರಾಮಣ್ಣ
ಭದ್ರಾವತಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ೧೨ ವರ್ಷಗಳ ಯಶಸ್ವಿ ಆಡಳಿತದ ಹಿನ್ನಲೆಯಲ್ಲಿ ಹಳೇನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಪ್ರಬುದ್ಧರ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ೧೨ ವರ್ಷಗಳ ಆಡಳಿತ ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಂತೆ ಮಾಡಿದ್ದು, ಪ್ರಸ್ತುತ ದೇಶದ ೧೪೦ ಕೋಟಿ ಜನರ ಹಿತಕಾಪಾಡುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಹೇಳಿದರು.
ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ೧೨ ವರ್ಷಗಳ ಯಶಸ್ವಿ ಆಡಳಿತದ ಹಿನ್ನಲೆಯಲ್ಲಿ ಹಳೇನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಪ್ರಬುದ್ಧರ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತೀಯ ಸೈನಿಕರು ಭಯೋತ್ಪಾದಕರ ಅಡಗುತಾಣಗಳಿಗೆ ನುಗ್ಗಿ ದಿಟ್ಟ ಕ್ರಮ ಕೈಗೊಂಡಿದ್ದಾರೆ. ನಕ್ಸಲ್ ವಾದ ನಿಯಂತ್ರಿಸುವಲ್ಲಿ ಮಹತ್ವದ ಸಾಧನೆ ಆಗಿದ್ದು, ಅನೇಕ ನಕ್ಸಲರು ಶರಣಾಗುತ್ತಿದ್ದಾರೆ. ನೆರೆ ರಾಷ್ಟ್ರಗಳಲ್ಲಿ ಯುದ್ಧದಂತಹ ತುರ್ತು ಪರಿಸ್ಥಿತಿಗಳು ಉಂಟಾದಾಗಲೂ ದೇಶದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ, ರೈತರಿಗೆ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಮೂಲಕ ನೇರ ಹಣ ವರ್ಗಾವಣೆ, ಮಹಿಳೆಯರಿಗಾಗಿ ಲಕ್ಪತಿ ದೀದಿ ಯೋಜನೆ, ಯುವಕರಿಗೆ ಸ್ಟಾರ್ಟ್‌ಅಪ್ ನೆರವು, ಹಿರಿಯ ನಾಗರಿಕರಿಗೆ ವಿವಿಧ ಕಲ್ಯಾಣ ಯೋಜನೆಗಳು, ಮನೆಮನೆಗೆ ಶುದ್ಧ ಕುಡಿಯುವ ನೀರು ಹಾಗೂ ಬಯಲು ಶೌಚ ಮುಕ್ತ ಅಭಿಯಾನ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದರು.
`ನಾನು ಪ್ರಧಾನಮಂತ್ರಿಯಲ್ಲ, ಪ್ರಧಾನ ಸೇವಕ' ಎಂಬ ಧ್ಯೇಯದೊಂದಿಗೆ ನರೇಂದ್ರ ಮೋದಿಯವರು ಕಾರ್ಯನಿರ್ವಹಿಸುತ್ತಿದ್ದು, ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. `ವಿಶ್ವಾಸ, ವಿಕಾಸ ಮತ್ತು ಜನಕಲ್ಯಾಣಕ್ಕೆ ೧೨ ವರ್ಷ' ಕಾರ್ಯಕ್ರಮದ ಉದ್ದೇಶ ಹಾಗೂ ಸ್ವರೂಪವನ್ನು ವಿವರಿಸಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಮಾತನಾಡಿದ ಪ್ರಬುದ್ಧರು, ನರೇಂದ್ರ ಮೋದಿ ಅವರಂತಹ ನಾಯಕರು ದೇಶಕ್ಕೆ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. ಅವರ ಆಡಳಿತದಲ್ಲಿ ದೇಶ ಹಾಗೂ ದೇಶದ ನಾಗರಿಕರು ಸುರಕ್ಷಿತರಾಗಿದ್ದಾರೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷೆ ಪದ್ಮಿನಿ, ಮನ್ ಕೀ ಬಾತ್ ಸಂಚಾಲಕ ಕುಪೇಂದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಸರಸ್ವತಿ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಮೊಸರಳ್ಳಿ ಅಣ್ಣಪ್ಪ ಹಾಗೂ ಹನುಮಂತ ನಾಯ್ಕ, ಮುಖಂಡರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ಓಬಿಸಿ ಮೋರ್ಚಾ ಅಧ್ಯಕ್ಷ ತೀರ್ಥಪ್ಪ, ಪ್ರಮುಖರಾದ ರವಿಕುಮಾರ್, ದೀಪಕ್, ರುದ್ರೇಶ್ ಜಾವಳಿ, ಶಕುಂತಲಾ ಪ್ರದೀಪ್, ಲೋಲಾಕ್ಷಿ ರಾಜಗುರು, ಚಂದ್ರಶೇಖರ್ ಜಾಧವ್, ಶಿವಮೂರ್ತಿ, ನಿರಂಜನ್, ಸರವಣ ಹಾಗೂ ವಿವಿಧ ಮೋರ್ಚಾಗಳ, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ಸಾಧಕರು ಉಪಸ್ಥಿತರಿದ್ದರು.
