ಉಲ್ಬಣಗೊಳ್ಳುತ್ತಿರುವ ಘನತ್ಯಾಜ್ಯ ಸಮಸ್ಯೆ ನಡುವೆ ನಗರಸಭೆಯಿಂದ ವಿನೂತನ ಪ್ರಯೋಗ
-ಶೇ.೫೦ರಷ್ಟು ಯಶಸ್ವಿ, ಶೇ.೧೦೦ರ ಗುರಿ ಸಾಧಿಸುವ ವಿಶ್ವಾಸ.
- ತ್ಯಾಜ್ಯ ಕಂಡು ಬರುವ ಸ್ಥಳಗಳ ಸ್ವಚ್ಛತೆ - ರಂಗೋಲಿ ಬಿಡಿಸಿ, ಗಿಡ ನೆಟ್ಟು, ಕಲಾಕೃತಿ ನಿರ್ಮಿಸಿ ಜಾಗೃತಿ.
- ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು -೨೦೨೬ ಜಾರಿ
* ಅನಂತಕುಮಾರ್
ಭದ್ರಾವತಿ : ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಘನ ತ್ಯಾಜ್ಯ ಸಮಸ್ಯೆ ಉಲ್ಬಣವಾಗುತ್ತಿದ್ದು, ನಗರಸಭೆ ಆಡಳಿತಕ್ಕೆ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪ್ರಾಥಮಿಕ ಹಂತದಲ್ಲಿಯೇ ಘನ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಕೈಗೊಂಡಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ನಡುವೆ ಎಲ್ಲಿಬೇಕೆಂದರಲ್ಲಿ ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರ್ಯ ಶೇ.೫೦ರಷ್ಟು ಯಶಸ್ವಿಯಾಗಿದೆ ಎಂಬುದು ಸ್ವಲ್ಪಮಟ್ಟಿಗೆ ಸಮಾಧಾನಕರ ಸಂಗತಿಯಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗಾಗಿ ವಿಭಿನ್ನ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಲಾಗಿದೆ. ಈ ಪೈಕಿ ಮನೆ ಮನೆ ಕಸ ಸಂಗ್ರಹಣೆ ಸಹ ಒಂದಾಗಿದ್ದು, ವಿವಿಧ ಮಾದರಿ ಘನ ತ್ಯಾಜ್ಯ ಸಂಗ್ರಹಣೆಗಾಗಿ ಪ್ರತ್ಯೇಕ ಕಸದ ಬುಟ್ಟಿಗಳನ್ನು ನೀಡಲಾಗಿದೆ. ಆದರೂ ಸಹ ಬಹುತೇಕ ಮನೆಗಳಲ್ಲಿ ಘನ ತ್ಯಾಜ್ಯ ವಿಂಗಡಿಸದೆ ಕಸದ ಗಾಡಿಯವರಿಗೆ ನೀಡಲಾಗುತ್ತಿದೆ. ಇನ್ನೂ ಕೆಲವು ಮನೆಗಳಲ್ಲಿ ಕಸದ ಗಾಡಿಗೆ ತ್ಯಾಜ್ಯ ನೀಡದೆ ರಸ್ತೆ ಬದಿಗಳಲ್ಲಿ, ಖಾಲಿ ಜಾಗಗಳಲ್ಲಿ ಹಾಗು ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುತ್ತಿದ್ದು, ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಕಳೆದ ಕೆಲವು ತಿಂಗಳುಗಳಿಂದ ಭದ್ರಾವತಿ ವಾರ್ಡ್ ನಂ.೧೯, ೨೦, ೨೧ ಮತ್ತು ೨೨ರ ವ್ಯಾಪ್ತಿಯ ಸುರಗಿತೋಪು, ಉಜ್ಜನಿಪುರ, ಕಾಗದನಗರ ವ್ಯಾಪ್ತಿಯಲ್ಲಿ ಸೂಪರ್‌ವೈಸರ್ ಎನ್. ಗೋವಿಂದ ನೇತೃತ್ವದ ತಂಡ ಈ ವಿನೂತನ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡು ಗಮನ ಸೆಳೆಯುತ್ತಿದೆ.
ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ನೇತೃತ್ವದಲ್ಲಿ ಪ್ರಭಾರ ಪರಿಸರ ಅಭಿಯಂತರರಾದ ಆಶಾಲತ, ಹಿರಿಯ ಆರೋಗ್ಯ ನಿರೀಕ್ಷಕ ಸಿ. ರಮೇಶ್, ಕಿರಿಯ ಆರೋಗ್ಯ ನಿರೀಕ್ಷಕ ನಿತೀಶ್ ಹಾಗು ಸಮುದಾಯ ಸಂಚಾಲಕರು ಮತ್ತು ಪೌರಕಾರ್ಮಿಕರನ್ನೊಳಗೊಂಡ ತಂಡ ವಿನೂತನಕ್ಕೆ ಪ್ರಯೋಗಕ್ಕೆ ಮುಂದಾಗಿದೆ. ಈ ತಂಡ ತ್ಯಾಜ್ಯ ಎಸೆಯುವ ಸ್ಥಳಗಳನ್ನು ಸ್ವಚ್ಛಗೊಳಿಸಿ ಸಗಣಿ ಸಾರಿಸಿ ರಂಗೋಲಿ ಬಿಡಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದೆ. ಕೆಲಸವೆಡೆ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಮತ್ತೆ ಕೆಲೆವೆಡೆ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರಯೋಗ ಶೇ.೫೦ರಷ್ಟು ಯಶಸ್ವಿಯಾಗಿದ್ದು, ಶೇ.೧೦೦ಕ್ಕೆ ೧೦೦ರಷ್ಟು ಗುರಿ ಸಾಧಿಸುವ ಉದ್ದೇಶ ಈ ತಂಡ ಹೊಂದಿದೆ.
ಈ ತಂಡ ಕೇವಲ ಜಾಗೃತಿ ಮೂಡಿಸದೆ ತ್ಯಾಜ್ಯ ಎಲ್ಲಿಬೇಕೆಂದರಲ್ಲಿ ಎಸೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸುವ ಕಾರ್ಯ ಸಹ ಕೈಗೊಳ್ಳುತ್ತಿದೆ. ಈ ಹಿಂದೆ ಇದ್ದ ಗರಿಷ್ಠ ೫೦೦ ರು. ದಂಡದ ಮೊತ್ತ ಪ್ರಸ್ತುತ ೫೦೦೦ ರು.ಗಳಿಗೆ ಏರಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ವಾರ್ಡ್ ನಂ.೧೯, ೨೦, ೨೧ ಮತ್ತು ೨೨ರ ವ್ಯಾಪ್ತಿಯ ಸುರಗಿತೋಪು, ಉಜ್ಜನಿಪುರ, ಕಾಗದನಗರ ವ್ಯಾಪ್ತಿಯಲ್ಲಿ ಸೂಪರ್‌ವೈಸರ್ ಎನ್. ಗೋವಿಂದ ನೇತೃತ್ವದ ತಂಡ ಈ ವಿನೂತನ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡು ಗಮನ ಸೆಳೆಯುತ್ತಿದೆ.
ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು -೨೦೨೬ ಜಾರಿ:
ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು -೨೦೨೬ ನಗರಸಭೆ ವ್ಯಾಪ್ತಿಯಲ್ಲಿ ಏ.೧ರಿಂದ ಜಾರಿಗೆ ಬಂದಿದ್ದು, ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವುದು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು, ಅಲ್ಲದೆ ನೀರು ಮತ್ತು ವಿದ್ಯುತ್ ಸಂಪರ್ಕ ಸಹ ಕಡಿತಗೊಳಿಸಲಾಗುವುದು ಎಂದು ನಗರಸಭೆ ಆಡಳಿತ ಎಚ್ಚರಿಸಿದೆ.
ಅರಣ್ಯ, ಪರಿಸರ ಮತ್ತು ಹವಮಾನ ಬದಲಾವಣೆ ಸಚಿವಾಲಯ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು -೨೦೨೬ ಜಾರಿಗೆ ತಂದಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯ ನಿವಾಸಿಗಳು, ವ್ಯಾಪಾರೋದ್ಯಮಿಗಳು, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ ಮತ್ತು ಇತರೆ ವಾಣಿಜ್ಯ ಉದ್ದಿಮೆದಾರರು ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳನ್ನು ೪ ವಿಧಗಳಾಗಿ ಮೂಲದಲ್ಲಿಯೇ ವಿಂಗಡಿಸಿ ನಗರಸಭೆಯ ಆಟೋ ಟಿಪ್ಪರ್‌ಗಳಿಗೆ ನೀಡುವುದು ಕಡ್ಡಾಯವಾಗಿದೆ.
೧. ಹಸಿ ತ್ಯಾಜ್ಯ : ಅಡಿಗೆ ಮನೆ ತ್ಯಾಜ್ಯ, ಆಹಾರ ತ್ಯಾಜ್ಯ, ತರಕಾರಿ ತ್ಯಾಜ್ಯ, ಮಾಂಸದ ತ್ಯಾಜ್ಯ, ಹಣ್ಣಿನ ತ್ಯಾಜ್ಯ, ಹೂವಿನ ತ್ಯಾಜ್ಯ, ಗಾರ್ಡನ್ ತ್ಯಾಜ್ಯ ಇತರೆ ಕರಗುವ ತ್ಯಾಜ್ಯ ವಸ್ತುಗಳು. ೨. ಒಣ ತ್ಯಾಜ್ಯ : ಎಲ್ಲಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು, ಬಟ್ಟೆಯ ತ್ಯಾಜ್ಯ, ಲೋಹ, ಕಾರ್ಡ್ ಬೋರ್ಡ್, ರಬ್ಬರ್, ಗಾಜು ಸೇರಿದಂತೆ ಇನ್ನಿತರ ವಸ್ತುಗಳು. ೩. ಸ್ಯಾನಿಟರಿ ತ್ಯಾಜ್ಯ : ಬಳಸಿದ ಡೈಪರ್ಸ್, ಸ್ಯಾನಿಟರಿ ನ್ಯಾಪ್ಕಿನ್ , ಕಾಂಡೋಮ್ಸ್. ೪. ವಿಶೇಷ ಕಾಳಜಿ ತ್ಯಾಜ್ಯ : ಪೈಂಟ್ ಡ್ರಮ್ಸ್/ಡಬ್ಬ, ಕೀಟನಾಶಕ ಔಷಧಿಗಳ ಡಬ್ಬ, ಅವಧಿ ಮೀರಿದ ಔಷಧಿಗಳು, ಬಲ್ಟ್, ಟ್ಯೂಬ್ ಲೈಟ್. ಒಡೆದ ಥರ್ಮಾಮೀಟರ್. ಹಳೆಯ ಬ್ಯಾಟರಿಗಳು/ಇ-ತ್ಯಾಜ್ಯ, ಬಳಸಿದ ಸಿರಂಜ್ ನೀಡಲ್ಸ್. ಹೀಗೆ ಒಟ್ಟು ೪ ವಿಧಗಳಲ್ಲಿ ತ್ಯಾಜ್ಯ ವಿಗಂಡಿಸಿ ನಗರಸಭೆಯ ವಾಹನಗಳಿಗೆ ನೀಡುವುದು.
ತಪ್ಪಿದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-೨೦೨೬ ರಂತೆ ತ್ಯಾಜ್ಯ ವಿಂಗಡಣೆ ಮಾಡದೆ ಇರುವವರ ವಿರುದ್ಧ ದಂಡ ವಿಧಿಸುವುದಲ್ಲದೆ ಮೂಲಭೂತ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕ್ರಮವಹಿಸಲಾಗುವುದು. ನಗರದ ಸ್ವಚ್ಛತೆಗೆ ಪ್ರತಿಯೊಬ್ಬರು ಸಹಕರಿಸುವ ಮೂಲಕ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-೨೦೨೬ ಯಶಸ್ವಿಗೊಳಿಸುವಂತೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ ಹಾಗು ಪೌರಾಯುಕ್ತ ಕೆ.ಎನ್ ಹೇಮಂತ್ ಕೋರಿದ್ದಾರೆ.

.jpeg)