ನಾಡಪ್ರಭು ಕೆಂಪೇಗೌಡರಿಂದ ಬೆಂಗಳೂರು ಪ್ರಮುಖ ನಗರವಾಗಿ ಗುರುತಿಸಿಕೊಂಡಿದೆ : ಬಲ್ಕೀಶ್ ಬಾನು 


ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಆಡಳಿತ ತಾಲೂಕು ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಸರ್ಕಾರದ ವಿವಿಧ ಸರ್ಕಾರಿ ಇಲಾಖೆಗಳು ಹಾಗು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಉದ್ಘಾಟಿಸಿದರು.

    ಭದ್ರಾವತಿ : ಪ್ರಸ್ತುತ ಬೆಂಗಳೂರು ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲು ಅಂದು ನಾಡಪ್ರಭು ಕೆಂಪೇಗೌಡರವರು ರೂಪಿಸಿದ ಯೋಜನೆಗಳು ಕಾರಣಗಳಾಗಿವೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.

    ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಆಡಳಿತ ತಾಲೂಕು ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಸರ್ಕಾರದ ವಿವಿಧ ಸರ್ಕಾರಿ ಇಲಾಖೆಗಳು ಹಾಗು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯುಳ್ಳ ಸಮರ್ಥ ಆಡಳಿತಗಾರರಾಗಿದ್ದರು. ನಗರ ಯೋಜನೆ, ನೀರಾವರಿ, ಕೃಷಿಗೆ ಸಂಬಂಧಿಸಿದಂತೆ ಅಂದು ಅವರು ರೂಪಿಸಿದ್ದ ದಕ್ಷ ನೀತಿಗಳಿಂದಾಗಿ ಬೆಂಗಳೂರು ಹಾಗು ಸುತ್ತಮುತ್ತಲಿನ ಪ್ರದೇಶಗಳು ವೇಗವಾಗಿ ಅಭಿವೃದ್ಧಿ ಕಾಣುವಂತಾಯಿತು. ವಿಶಾಲ ರಸ್ತೆಗಳು, ಮಾರುಕಟ್ಟೆಗಳು ಹಾಗು ನಾಗರೀಕ ಸೌಲಭ್ಯಗಳುಳ್ಳ ಜನವಸತಿ ಪ್ರದೇಶಗಳನ್ನು ನಿರ್ಮಿಸುವುದರ ಮೂಲಕ ಕೆಂಪೇಗೌಡರು ಬೆಂಗಳೂರನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸಿದರು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಮಾತನಾಡಿ, ಎಲ್ಲಾ ಧರ್ಮದ ಪ್ರಾರ್ಥನಾ ಸ್ಥಳಗಳ ನಿರ್ಮಾಣಕ್ಕೆ ಉದಾರ ದೇಣಿಗೆ ನೀಡಿದ್ದ ಕೆಂಪೇಗೌಡರು, ಸರ್ವಧರ್ಮಸಹಿಷ್ಣತೆಗೆ ಹೆಸರುವಾಸಿಯಾಗಿದ್ದರು ಎಂದರು.

    ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಚನ್ನಪ್ಪ, ಲತಾ ಚಂದ್ರಶೇಖರ್ ಸೈಯದ್ ರಿಯಾಜ್, ಪೌರಾಯುಕ್ತ ಕೆ.ಎನ್ ಹೇಮಂತ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಉಪತಹಸೀಲ್ದಾರ್ ಮಂಜಾನಾಯ್ಕ, ಮುಖಂಡರಾದ ಎಸ್. ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಕಾರ್ಯಕ್ರಮಕ್ಕೂ ಮೊದಲು ನಗರದ ಅಪ್ಪರ್ ಹುತ್ತಾ ಬಸ್ ನಿಲ್ದಾಣದಿಂದ ಅಂಬೇಡ್ಕರ್ ಭವನದವರೆಗೂ ವಿವಿಧ ಕಲಾ ತಂಡಗಳು ಹಾಗು ನಾಡಪ್ರಭು ಕೆಂಪೇಗೌಡರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.