ಪತ್ರಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಾಮಾಜಿವಾದಿ ನಾಯಕ ಮಂಗೋಟೆ ಮುರಿಗೆಪ್ಪ 

೫೦ ಸಾವಿರ ರು. ದೇಣಿಗೆ ನೀಡಿ ಸ್ಮರಿಸಿದ ಪುತ್ರ, ನ್ಯಾಯವಾದಿ ಮಂಗೋಟೆ ರುದ್ರೇಶ್ 


ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ನ್ಯಾಯವಾದಿ ಮಂಗೋಟೆ ರುದ್ರೇಶ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಅವರಿಗೆ ೫೦ ಸಾವಿರ ರು. ದೇಣಿಗೆ ಚೆಕ್ ಹಸ್ತಾಂತರಿಸಿದರು.  
    ಭದ್ರಾವತಿ: ಸಾಮಾಜವಾದಿ ನಾಯಕರು, ಹಿರಿಯ ಚಿಂತಕರು, ನ್ಯಾಯವಾದಿಗಳಾದ ದಿವಂಗತ ಮಂಗೋಟೆ ಮುರಿಗೆಪ್ಪನವರ ಆಶಯದಂತೆ ಪತ್ರಕರ್ತರ ಕ್ಷೇಮ ನಿಧಿಗೆ ೫೦ ಸಾವಿರ ರು. ದೇಣಿಗೆ ನೀಡುತ್ತಿದ್ದು, ಸದ್ಬಳಕೆಕೊಳ್ಳುವಂತೆ ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ನ್ಯಾಯವಾದಿ ಮಂಗೋಟೆ ರುದ್ರೇಶ್ ಮನವಿ ಮಾಡಿದರು. 
    ಅವರು ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಅವರಿಗೆ ಚೆಕ್ ಹಸ್ತಾಂತರಿಸಿ ಮಾತನಾಡಿದರು. 
    ನಮ್ಮ ತಂದೆಯವರಾದ ಮಂಗೋಟೆ ಮುರಿಗೆಪ್ಪ ಅವರು ಪತ್ರಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು,  ಪತ್ರಕರ್ತರ ನೋವು-ನಲಿವುಗಳಿಗೆ ಸ್ಪಂದಿಸುತ್ತಿದ್ದರು. ಅವರ ನಿಧನದ ನಂತರ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಟ್ರಸ್ಟ್ ಸ್ಥಾಪಿಸಲಾಗಿದ್ದು, ಈಗಾಗಲೇ ಹಲವಾರು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮಂಗೋಟೆ ಮುರಿಗೆಪ್ಪನವರ ಆಶಯದಂತೆ ೫೦ ಸಾವಿರ ರು. ದೇಣಿಗೆ ನೀಡಲು ಟ್ರಸ್ಟ್ ತೀರ್ಮಾನ ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಚೆಕ್ ಹಸ್ತಾಂತರಿಸಲಾಗಿದೆ. ಪತ್ರಕರ್ತರ ಏಳಿಗೆಗೆ ದೇಣಿಗೆ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು. 
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಮಾತನಾಡಿ, ಪತ್ರಕರ್ತರಿಗೆ ಯಾವುದೇ ರೀತಿಯ ವೇತನಗಳು ಇರುವುದಿಲ್ಲ. ಸಂಕಷ್ಟದಲ್ಲಿ ಜೀವನ ಸಾಗಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ, ಜಿಲ್ಲಾ ಹಾಗು ತಾಲೂಕು ಘಟಕಗಳು ಪತ್ರಕರ್ತರ ಹಿತರಕ್ಷಣೆ ಮುಂದಾಗಿವೆ. ಈ ನಿಟ್ಟಿನಲ್ಲಿ ಪತ್ರಕರ್ತರ ಕ್ಷೇಮ ನಿಧಿ ಸ್ಥಾಪಿಸಲು ಈಗಾಗಲೇ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಮಂಗೋಟೆ ರುದ್ರೇಶ್ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಇದಕ್ಕೆ ಪೂರಕವಾಗಿ ಅವರು ಸ್ಪಂದಿಸಿ ೫೦ ಸಾವಿರ ರು. ದೇಣಿಗೆ ನೀಡಿದ್ದಾರೆ. ಮಂಗೋಟೆ ಮುರುಗೆಪ್ಪ ಟ್ರಸ್ಟ್ ಅಧ್ಯಕ್ಷರು ಹಾಗು ಟ್ರಸ್ಟಿಗಳಿಗೆ ಪತ್ರಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 


ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ನ್ಯಾಯವಾದಿ ಮಂಗೋಟೆ ರುದ್ರೇಶ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಅವರಿಗೆ ೫೦ ಸಾವಿರ ರು. ದೇಣಿಗೆ ಚೆಕ್ ಹಸ್ತಾಂತರಿಸಿದರು.  . ಸಂಘದ ವತಿಯಿಂದ ಮಂಗೋಟೆ ರುದ್ರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಮಂಗೋಟೆ ಮುರುಗೆಪ್ಪ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ ಸಂತೋಷ್ ಮಾತನಾಡಿ, ಟ್ರಸ್ಟ್ ನಡೆದು ಬಂದ ದಾರಿ ವಿವರಿಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಹಿತ ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. 
    ಟ್ರಸ್ಟಿಗಳಾದ ನ್ಯಾಯವಾದಿ ಉಮೇಶ್ ಮತ್ತು ನಗರಸಭೆ ಮಾಜಿ ಸದಸ್ಯ ಜಿ. ಆನಂದಕುಮಾರ್ ಹಾಗು ಪ್ರಸನ್ನಕುಮಾರ್ ಉಪಸ್ಥಿತಿರಿದ್ದರು. ಸಂಘದ ವತಿಯಿಂದ ಮಂಗೋಟೆ ರುದ್ರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿ, ಕಾರ್ಯದರ್ಶಿ ಅನಂತಕುಮಾರ್ ವಂದಿಸಿದರು. ಸಂಘದ ಪದಾಧಿಕಾರಿಗಳು ಹಾಗು ಸದಸ್ಯರು ಪಾಲ್ಗೊಂಡಿದ್ದರು.