ವಿದ್ಯುತ್ ಉಪ ಘಟಕ ಸ್ಥಾಪನೆ : ಸಚಿವರಿಗೆ ಕೃತಜ್ಞತೆ 


ಆರ್. ವೇಣುಗೋಪಾಲ್
     ಭದ್ರಾವತಿ : ತಾಲೂಕಿನ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಸ್ಥರ ಬಹುವರ್ಷಗಳ ಬೇಡಿಕೆಯಾದ ಹುಣಸೇಕಟ್ಟೆ ಗ್ರಾಮದಲ್ಲಿ ೨*೨೦ ಎಂ.ವಿ.ಎ ೬೬/೧೧ ಕೆ.ವಿ  ವಿದ್ಯುತ್ ಉಪ ಘಟಕ (ಸಬ್‌ಸ್ಟೇಷನ್) ಸ್ಥಾಪಿಸಲು ಇಂಧನ ಇಲಾಖೆ ಮುಂದಾಗಿರುವುದಕ್ಕೆ ನಗರದ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಗ್ರಾಮಸ್ಥರ ಪರವಾಗಿ ಇಂಧನ ಹಾಗು ಪ್ರವಾಸೋದ್ಯಮ ಖಾತೆ ಸಚಿವ ಕೆ.ಜೆ ಜಾರ್ಜ್‌ರವರಿಗೆ ಕೃತಜ್ಞತೆ ಸಲ್ಲಿಸಿದೆ.  
    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರಿಯೂರು, ಅರಳಿಕೊಪ್ಪ, ಕಂಬದಾಳ್ ಹೊಸೂರು, ತ್ಯಾವರಘಟ್ಟ, ಸಿಂಗನಮನೆ, ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರಿಂದ ಗ್ರಾಮಸ್ಥರಿಗೆ, ರೈತರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದ್ದು, ಅಲ್ಲದೆ ಕುಡಿಯುವ ನೀರಿನ ಸರಬರಾಜಿನಲ್ಲಿಯೂ ಸಮಸ್ಯೆ ಎದುರಾಗುತ್ತಿತ್ತು. ಈ ಹಿನ್ನಲೆಯಲ್ಲಿ ೨*೨೦ ಎಂ.ವಿ.ಎ ೬೬/೧೧ ಕೆ.ವಿ ವಿದ್ಯುತ್ ಉಪ ಘಟಕ (ಸಬ್‌ಸ್ಟೇಷನ್) ಸ್ಥಾಪಿಸುವಂತೆ ಸಚಿವರಿಗೆ ಟ್ರಸ್ಟ್‌ನಿಂದ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ಉಪ ಘಟಕ ಸ್ಥಾಪನೆಯಿಂದ ಸುಮಾರು ೩೦ ಸಾವಿರ ಜನರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಲಾಗಿತ್ತು. 
    ಮನವಿಗೆ ಸ್ಪಂದಿಸಿದ ಸಚಿವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದರು. ಈ ಹಿನ್ನಲೆಯಲ್ಲಿ ನಿಗಮ ವಿದ್ಯುತ್ ಉಪ ಘಟಕ ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ನಿಗಮದ ತಾಂತ್ರಿಕ ವಿಭಾಗದ ಮುಖ್ಯ ವ್ಯವಸ್ಥಾಪಕರು ಶಿವಮೊಗ್ಗ ಅಧೀಕ್ಷಕ ಇಂಜಿನಿಯರ್ ಅವರಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ಟೆಂಡರ್ ಕರೆದು ಶೀಘ್ರ ಕಾಮಗಾರಿ ಆರಂಭಿಸುವಂತೆ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಮನವಿ ಮಾಡಿದೆ. 
    ವಿದ್ಯುತ್ ಉಪಘಟಕ ಆರಂಭಕ್ಕೆ ಕಾರಣಕರ್ತರಾಗಿರುವ ಸಚಿವರಿಗೆ ಹಾಗು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್‍ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೃಜ್ಞತೆ ಸಲ್ಲಿಸಿದ್ದಾರೆ.