ಮಕ್ಕಳಲ್ಲಿ ಭವಿಷ್ಯದ ನ್ಯೂನ್ಯತೆಗಳು ತಡೆಯಲು ಪಲ್ಸ್ ಪೋಲಿಯೋ ಸಹಕಾರಿ : ಬಲ್ಕೀಶ್ ಬಾನು
ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕುವ ಮೂಲಕ ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು ಕಾರ್ಯಕ್ರಮ ಉದ್ಘಾಟಿಸಿದರು.
- ಪಲ್ಸ್ ಪೋಲಿಯೋ ದಿನ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು
- ಭವಿಷ್ಯದ ನ್ಯೂನ್ಯತೆ ತಪ್ಪಿಸಲು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ
- ತಾಲೂಕಿನಲ್ಲಿ ೨೨,೩೫೪ ಮಕ್ಕಳ ಗುರುತಿಸುವಿಕೆ
- ೧೭೯ ಬೂತ್, ೬೭೫ ಮಂದಿ ಬಳಕೆ
ಭದ್ರಾವತಿ : ಭವಿಷ್ಯದಲ್ಲಿ ಮಕ್ಕಳ ಉತ್ತಮ ಆರೋಗ್ಯದ ಹಿನ್ನಲೆಯಲ್ಲಿ ಪಲ್ಸ್ ಪೋಲಿಯೋ ಸಹಕಾರಿಯಾಗಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ೫ ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವಂತೆ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಕರೆ ನೀಡಿದರು.
ಅವರು ಭಾನುವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದಲ್ಲಿ ಮಕ್ಕಳು ನ್ಯೂನ್ಯತೆಯಿಂದ ಬಳಲುವುದನ್ನು ತಪ್ಪಿಸುವ ಉದ್ದೇಶದಿಂದ ಪಲ್ಸ್ ಪೋಲಿಯೋ ಲಸಿಕೆ ವಿಶ್ವದಾದಂತ್ಯ ೫ ವರ್ಷದೊಳಗಿನ ಮಕ್ಕಳಿಗೆ ಹಾಕಲಾಗುತ್ತಿದೆ. ಪಲ್ಸ್ ಪೋಲಿಯೋ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು ೨೨,೩೫೪ ಮಕ್ಕಳನ್ನು ಗುರುತಿಸಲಾಗಿದೆ. ಪಲ್ಸ್ ಪೋಲಿಯೋ ಲಸಿಕೆ ಹಾಕಲು ೧೭೯ ಬೂತ್‌ಗಳನ್ನು ತೆರೆಯಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಡಾ.ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಹಾಗು ನಿರ್ಮಲ ಆಸ್ಪತ್ರೆ ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ೬೭೫ ಮಂದಿಯನ್ನು ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ನಗರ ಪ್ರದೇಶದಲ್ಲಿ ೪ ದಿನ ಹಾಗು ಗ್ರಾಮಾಂತರ ಪ್ರದೇಶದಲ್ಲಿ ೩ ದಿನ ಸೇರಿದಂತೆ ಒಟ್ಟು ೭ ಈ ಕಾರ್ಯ ನಡೆಯಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಸದಸ್ಯೆ ಅನುಸುಧಾ ಮೋಹನ್ ಪಳನಿ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಕಾರಿ ಡಾ. ಶಂಕ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಬಾಯಿ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಜೆ. ರಾಜ, ವಾಹಿದ್ ಖಾನ್, ಆಸ್ಪತ್ರೆಯ ನರ್ಸಿಂಗ್ ಮೇಲ್ವಿಚಾರಕಿ ಶೀಲಾ ಮೇರಿ, ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ರುದ್ರಮ್ಮ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು, ವರ್ಷದೊಳಗಿನ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.
